ಶುಕ್ರವಾರ, ಮಾರ್ಚ್ 1, 2019

ದಾಟು

ಅಪ್ಪ:
ಇರಸು ಮುರಸು ಸುದ್ದಿ ತಿಳದಾಗಿನಿಂದಲೂ ಇತ್ತು. ಒಂದು ಕೈ ನೋಡೇಬಿಡೋದು ಅಂತ ಠರಾಯಿಸಿ ಬೆಂಗಳೂರಿಗೆ ಬಂದಿದ್ದೆ. ಅವಳೇ ಬುಕ್ ಮಾಡಿದ ಕ್ಯಾಬ ಹಿಡಿದು ದೂರದ ಅವಳ ಅಪಾರ್ಟ್ಮೆಂಟ್ ಸೇರಿ ಪುಲಕಿತ ರಸ್ತೋಗಿ ಅನ್ನವವ ಅದುವರೆಗೂ ಅಪರಿಚಿತವಾಗಿದ್ದ ವ್ಯಕ್ತಿ ಮಾಡಿದ ಅಡಿಗೆ ಉಂಡು ಕೂತಾಗಲೂ ತಳಮಳ ಕಮಿಯಾಗಿರಲಿಲ್ಲ. ಊಟ ಬಡಿಸುವಾಗ ಅವ ಹೇಳಿದ ಮಾತು “ವಸುಗೆ ನನ್ನ ಕುಕಿಂಗ್ ಸೇರುತ್ತದೆ..” ಅಂದಿದ್ದು ಸಹ ಪರಿಣಾಮ ಬೀರಿರಲಿಲ್ಲ. ಹಿಂದಿ ಅಥವಾ ಇಂಗ್ಲೀಶ್ ಭಾಷೆಯಲ್ಲಿ ಮಾತ್ರ ಅವನೊಡನೆ ಸಂವಹನ ಸಾಧ್ಯ. ವಸು ಅವನಿಗೆ ಕನ್ನಡ ಕಲಿಸುತ್ತಿದ್ದಾಳೆ ಅಂತ ಹೇಳಿಕೊಂಡವನ ನೋಡಿದೆ. ಇವ ಬಂದ ಮೇಲೆ ಸಾಕಷ್ಟು ಅಲ್ಲೋಲ ಕಲ್ಲೋಲ ಆಗೇದ..ಇಂಥವನೊಡನೆ ನಗುತ್ತ ಮಾತಾಡಬಾರದು ಅಂತ ನಿರ್ಧಾರ ಮಾಡಿದಂತೆ..ಸುಮ್ಮನೇ ಕೂತಿದ್ದೆ. ನಾನು ಟಿವಿ ನೋಡುತ್ತಿರುವಾಗ ಅವ ತಯಾರಾಗಿ ಬಂದು ತನಗೆ ಒಂದು ಮೀಟಿಂಗ ಇರುವುದಾಗಿ, ವಸು ಇನ್ನೇನು ಒಂದೂವರೆ ತಾಸು ಕಳೆದು ಬರುತ್ತಾಳೆ ಅಂತ ತಿಳಸಿ ಹೋದ.

“ಒಂದೆರಡು ಹೊಡತ ಹೊಡದ್ರೂ ಅಡ್ಡಿ ಇಲ್ಲ..ಆದರ ಸೋಕ್ಷಮೋಕ್ಷ ಮಾಡದ ವಾಪಸ ಬರಬ್ಯಾಡರಿ..” ಹೆಂಡತಿ ರಮಾ ಆಡಿದ ಮಾತು ನೆನಪಾತು.ಹೊಡತ ಬಡಿತಗಳಿಂದ ಈ ಸಮಸ್ಯಾ ಬಗೀಹರೀಲಾರದ್ದು..ಇದಕ್ಕ ನೇರಾನೇರ ಮಾತುಕತೀನ ಮದ್ದು ಅಂತ ತಿಳಿಸಿಹೇಳಿ ಬಂದಿದ್ದೆ. ವಸು ಹಿಂಗ ಮಾಡತಾಳ ಅಂತ ಕನಸಿನ್ಯಾಗೂ ನಾ ಎಣಸಿರಲಿಲ್ಲ. ಅದೆಂಗ ಒಂದು ವಯಸ್ಸು ದಾಟಿದ ಮ್ಯಾಲ ಮಕ್ಕಳಿಗೆ ಒಂದು ಪ್ರಮುಖ ನಿರ್ಧಾರ ತಗೊಳ್ಳುವಾಗ ಅಪ್ಪ ಅವ್ವಗ ಒಂದು ಮಾತು ತಿಳಸುವುದು ಬ್ಯಾಡ ಅನಸತದ..ಅವರಿಂದ ನಕಾರ ಸಿಗತದ ಅನ್ನುವ ಖಾತ್ರಿನೋ ಅಥವಾ ಇದು ನಂದು ಲೈಫು..ಇದರ ನಿರ್ಣಯಾ ಇನ್ನ ಮುಂದ ನಾನ ತಗೋತೀನಿ ಅಂತ ಸಾರಿ ಹೇಳುವ ಎದೆಗಾರಿಕನೋ ಗೊತ್ತಾಗಲಿಲ್ಲ. ಕೈತುಂಬ ಸಿಗೋ ಸಂಬಳ, ನಾಕು ದೇಶ ಸುತ್ತಿದ ಅನುಭವ ಅಥವಾ ಅಪರಿಚಿತ ಊರಾಗ ಬಂದು ನೆಲೆ ನಿಂತುಕೊಂಡ ಹಮ್ಮು ಎಲ್ಲಾನೂ ಹಿಂಗ ಮಾತು ಕೇಳದ್ದಕ್ಕ ಇಂಬು ಕೊಡತಾವ .ಇಂತಹ ಪ್ರಶ್ನಿಗಳು ಚುಚ್ಚತಿದ್ದವು. ನೈತಿಕತಾ ಅನ್ನುವುದು ನಮ್ಮ ಪೀಳಿಗೆಗೆ ಮಾತ್ರ ಇತ್ತೋ ಹೆಂಗ..
ವಸುನ ಸುದ್ದಿ ತಿಳದಾಗಿನಿಂದಲೂ ರಮಾ ಕಡೆಯಿಂದ ಬರೇ ಚುಚ್ಚುಮಾತುಗಳು ಕೇಳಿದ್ದೆ…

“ನೀವ ಮಾಡಿದ ಅಚ್ಛಾದ ಪರಿಣಾಮ ಇದು. ಅಕಿಗೆ ಅಷ್ಟು ಓದಸಬ್ಯಾಡರಿ..ಅಂದೆ ಕೇಳಲಿಲ್ಲ..ಹೋಗಲಿ ಓದು ಮುಗದ ಮ್ಯಾಲೆ ಮದುವಿ ಮಾಡೋಣು ಅಂದೆ..ಅಕಿ ಕರಿಯರ್ ಅಂತ ಕುಣದಳು. ನೀವು ಚಪ್ಪಾಳಿ ಹೊಡದು ಬೆಂಬಲಾ ಕೊಟ್ರಿ..”

ವಸುಗ ಪಿಯುಸಿಯೊಳಗ ಮಾರ್ಕು ಛಲೋ ಬಂದಿದ್ದವು. ಇಂಜಿನೀಯರ ಆಗಲಿ ಅನ್ನುವುದು ಆಶಾ..ಶಿಕ್ಷಣಕ್ಕ ಸಾಲಾ ಮಾಡಿದ್ದೆ. ಮಗಗ ಓದಿನ್ಯಾಗ ಅಷ್ಟು ಆಸಕ್ತಿ ಇರಲಿಲ್ಲ. ಅವ ಬಿಕಾಮ್ ಮುಗಸಿ ಒಂದು ಸಹಕಾರಿ ಬ್ಯಾಂಕಿನ್ಯಾಗ ಕೆಲಸಕ್ಕ ಸೇರಿಕೊಂಡಿದ್ದ. ವಸುಗ ಕನಸಿದ್ದವು..ಅವಕ್ಕ ನಾ ನೀರುಹಾಕಿ ಪಾಲಿಸಿದೆ. ಧಾರವಾಡದಾಗಿನ ಕಾಲೇಜಿನ್ಯಾಗ ಅಕಿಗ ಸೀಟು ಸಿಕ್ಕಿತ್ತು. ಇಡೀ ಬಳಗದವರು ನಾ ಮಾಡಿದ ಈ ನಿರ್ಧಾರಕ್ಕ ಸಪೋರ್ಟು ಕೊಟ್ಟಿರಲಿಲ್ಲ..ಹೆಣ್ಣುಹುಡುಗಿಯರಿಗೆ ಹಿಂಗ ಸಾಲಾ ಮಾಡಿ ಶಿಕ್ಷಣ ಕೊಡಸುವುದು ದಂಡ ಅನ್ನೋದು ಅವರ ಮಾತು. ನನಗ ಒಂದು ಬ್ಯಾರೆ ಕೆಲಸ ಮಾಡಿದ ಹೆಮ್ಮೆ. ಇಂಜಿನೀಯರ ಅನಿಸಿಕೋತಾಳ ಮಗಳು ಇದು ಹೆಮ್ಮೆಯ ವಿಷಯವಾಗಿತ್ತು. ಕೊಂಕು ಮಾತು ಬಂದವು. ರಮಾಳ ಅಣ್ಣ ವೆಂಕಣ್ಣ ಹೇಳಿದ್ದ..

“ಭಾವುಜಿ ನಾಳೆ ಅಕಿ ನೌಕರಿ ಮಾಡತಾಳ ಬೆಂಗಳೂರಾಗ ಕೆಲಸ ಸಿಗತದ ಪಗಾರನೂ ಛಲೋ ಸಿಗತದಂತ ಸಾಫ್ಟವೇರದಾಗ..ದುಡ್ಡು ಕೈಗೆ ಬಂದಾಗ ಅಕಿ ಮಾತು ಕೇಳತಾಳಂತ ಏನು ಖಾತ್ರಿ..ನೋಡರಿ ಅಕಿಗೆ ಶಿಕ್ಷಣದ ಸಲುವಾಗಿ ಸಾಲಾ ಮಾಡದ ಮದುವಿ ಸಲುವಾಗಿ ಮಾಡರಿ..ಛಲೋ ಸಂಬಂಧ ನಾನು ಹುಡಕತೇನಿ”

ಟಿಪಿಕಲ್ ಮಾಳಮಡ್ಡಿ ಮಠದ ಓಣಿ ಮಾತು ಅವು. ವೆಂಕಣ್ಣನಂತಹವರ ಮೆಂಟಾಲಿಟಿ ಇಷ್ಟ ಇದು ಸುಧಾರಣಾ ಆಗುವ ಮಂದಿ ಅಲ್ಲ ಅಂತ ಅನಿಸಿತ್ತು.ವಸು ಇಂಜಿನೀಯರಿಂಗ ಕಾಲೇಜಿಗೆ ಹೊರಟಳು. ನನಗೇನೋ ಸಾಧಿಸಿದ ಖುಶಿ.
ಮೊದಲಿಂದಲೂ ಈ ಅತಿಯಾದ ಸಂಪ್ರದಾಯಪಾಲನಾ ಆಗಿ ಬರತಿರಲಿಲ್ಲ.ಅಪ್ಪ ಮತ್ತು ಅವ್ವ ಇಬ್ಬರೂ ಕಟ್ಟಾಸಂಪ್ರದಾಯವಾದಿಗಳು.ಆರಾಧನಿ, ಏಕಾದಶಿಯ ನಿರ್ಜಲ ಉಪವಾಸ, ತಪ್ತ ಮುದ್ರಾಧಾರಣಾ ಎಲ್ಲಾನೂ ಪಾಲಿಸಿಕೋತ ಬಂದಿದ್ದರು.ಒಂದು ಹಂತದವರೆಗೆ ನಾನು ಪಾಲಿಸಿದ್ದೆ..ವಯಸ್ಸು ಬೆಳೆದಂತೆ ಅವುಗಳ ಬಗ್ಗೆ ಪ್ರಶ್ನೆ ಮೂಡಿದವು ಕೇಳಿದಾಗ ಉತ್ತರ ಸಿಗಲಿಲ್ಲ. ಅಪ್ಪ ಅಂತೂ ನಾ ಕೇಳುವ ಪ್ರಶ್ನಿಗಳಿಗೆ ಸಿಡಕತಿದ್ದ.ವಾದ ವಿವಾದ ಆಗತೊಡಗಿದವು. “ಎಂಥಾ ಮಗ ಹುಟ್ಟಿದೇಲೇ” ಅನ್ನುವದು ಅಪ್ಪನದು ಕೊರಗು.ಹಿಂಗ ಒಮ್ಮೆ ಜೋರು ವಾದ ನಡೆದಾಗ ಅಪ್ಪ ಕುಸದು ಬಿದ್ದವ ಮ್ಯಾಲೆ ಏಳಲೇ ಇಲ್ಲ. ಅವನ ನೌಕರಿ ಅನುಕಂಪದ ಆಧಾರದ ಮೇಲೆ ನಂಗ ಬಂತು.ಅವ್ವ ಹಟಾ ಹಿಡದು ಪಕ್ಕಾ ಸಂಪ್ರದಾಯವಾದಿ ಮನೆತನದ ರಮಾಗೆ ಗಂಟು ಹಾಕಿದಳು.

ರಮಾಳದು ಸಂಪ್ರದಾಯ,ಮಡಿ ಹುಡಿಯೊಳಗ ಒಂದು ಹೆಜ್ಜಿ ಮುಂದ ಇತ್ತು. ಹರೇದ ಕಾಲ ಛಂದನ ಹೆಂಡತಿ ಬ್ಯಾರೆ ಬಯಕಿಗಳು ಗರಿಗೆದರತಿದ್ದವು ಆದರ ರಮಾಳ ವೃತ,ನಿಯಮ ಅಡ್ಡಿಯಾಗತಿದ್ದವು.ಬಹಳ ಸಲ ಅಕಿಗೆ ಎದುರು ಕೂಡಿಸಿಕೊಂಡು ಹೆಂಗ ಜಗತ್ತು ಬದಲಾಗೇದ ಅದರ ಗತಿಗೆ ತಕ್ಕಂಗ ಹೆಜ್ಜಿ ಹಾಕಬೇಕು ಅಂತೆಲ್ಲ ಹೇಳತಿದ್ದೆ.ಆದರ ಏನೂ ಪ್ರಯೋಜನ ಆಗಲಿಲ್ಲ.ರಮಾ ಅಡಿಗಿ ಛಲೋ ಮಾಡತಿದ್ದಳು..ಹಾಸಿಗಿಯೊಳಗೂ ಸುಖ ಕೊಡತಿದ್ದಳು..ಆದರ ನಾ ಹುಡುಕುತಿದ್ದ ಅಂತರಂಗದ ಗೆಳತಿ ಅವಳೆಂದೂ ಆಗಲಿಲ್ಲ.

ಚೊಚ್ಚಲ ಗಂಡು ಹಡೆದ ಖುಶಿ..ಇನ್ನೊಂದು ಗಂಡು ಆಗಲಿ ಇದು ಅವಳ ಹಂಬಲ. ಆದರ ಪ್ರಮೋದ ಹುಟ್ಟಿದಮ್ಯಾಲೆ ಎರಡುಮೂರು ಸಲ ಅಬಾರ್ಷನ ಆತು. ನಾಜೂಕಾದಳು. ನಾ ತಿಳಿಹೇಳಿದೆ..ಆದರ ಅಕಿ ಮಾತು ಕೇಳಲಿಲ್ಲ. ಆದರ ಗರ್ಭಕಟ್ಟಿ ಹೊರಬಂದಾಕಿ ವಸು ಆಗಿದ್ದಳು. ಹೆಣ್ಣು ಅಪರೂಪ..ನನಗೂ ಮನಸಿತ್ತು ಹೆಣ್ನಾಗಲಿ ಅಂತ. ರಮಾಗ ಅಸಮಾಧಾನ ಇತ್ತು..ಮ್ಯಾಲಾಗಿ ಮತ್ತ ಬಸರಾದರ ಧೋಖಾ ಅದ ಅದ ಅಂತ ಡಾಕ್ಟರರು ಹೇಳಿದ್ದರು.

ವಸು ಹುಟ್ಟಿ ಬೆಳೆದು ನಿಂತಾಗ ಒಂದು ಠರಾಯಿಸಿದೆ. ರಮಾಳ ಪ್ರಭಾವ ಇಕಿಮ್ಯಾಲೆ ಆಗಗೊಡಬಾರದು ಅಂತ.ಹಿಂಗಾಗಿ ಏನ ವಾದ ಆದಾಗ ವಸುಗ ಸಪೋರ್ಟಮಾಡತೊಡಗಿದೆ.”ನಿಮ್ಮ ಅಚ್ಛಾದಿಂದ ಅಕಿ ಕೆಡತಾಳ”ಅನ್ನುವ ರಮಾಳ ಗೊಣಗಾಟಕ್ಕ ಕ್ಯಾರೆ ಅನ್ನಲಿಲ್ಲ.ಇಂಜಿನೀಯರಿಂಗ ಓದುವಾಗ ವಸುಗ ಕೇಳಕೊಂಡು ಅಕಿ ಸಹಪಾಠಿಗಳ ಫೋನು ಬರತಿದ್ದವು.ಕೆಲವು ಸಲ ಗಂಡು ಹುಡುಗರು ಸಹ ಫೋನುಮಾಡತಿದ್ದರು.ಪ್ರಾಜೆಕ್ಟು, ಅಸೈನಮೆಂಟು, ಸೆಮಿನಾರು ಇಂತಹ ಕಾಲೇಜಗೆ ಸಂಬಂಧಿಸಿದ ಫೋನು ಅವು. ರಮಾಗ ಮಾತ್ರ ಗಂಡುಹುಡುಗರು ಫೋನು ಯಾಕ ಮಾಡತಾರ..ಅವರ ಜೋಡಿ ಯಾಕ ವಸುಗ ಸಲಿಗಿ..ಹಿಂಗ ವಾದ ಹಾಕತಿದ್ದಳು.ನಾ ಅಕಿ ಜೋಡಿ ಹಾಕ್ಯಾಡತಿದ್ದೆ. ಸೆರಗಿನಿಂದ ಕಣ್ಣೀರು ಒರೆಸಿಕೋತ ರಮಾ ಸುಮ್ಮನಾಗತಿದ್ದಳು. ಬರತಾಬರತಾ ಮನಿಯೊಳಗ ಎರಡು ಪಾರ್ಟಿ ಆದವು.ಪ್ರಮೋದ ಬಿಕಾಮ್ ಮುಗಸಿ ಸಹಕಾರಿ ಬ್ಯಾಂಕಿನ್ಯಾಗ ನೌಕರಿ ಹಿಡದಿದ್ದ.ಅವಾ ಯಾವಾಗಲೂ ಅವರ ಅವ್ವನ ಬಾಜು. ವಸು ನನ್ನ ಆಶ್ರಯಿಸಿದ್ದಳು.ಛಲೋ ಮಾರ್ಕು ಬೀಳತಿದ್ದವು..ಇಕಿಗೆ ಸಾಲಾ ಮಾಡಿ ಇಂಜಿನೀಯರಿಂಗ ಓದಿಸಿ ನಾನು ತಪ್ಪು ಮಾಡಿಲ್ಲ ಅನ್ನುವ ಸಮಾಧಾನ ಬಂತು.ಅದು ಇನ್ನೂ ಹೆಚ್ಚಾಗಿದ್ದು ಅಕಿ ಕ್ಯಾಂಪಸ್ಸಿನ್ಯಾಗ ಆಯ್ಕೆಯಾಗಿ ಬೆಂಗಳೂರಿನ ಕಂಪನಿಗೆ ಕೆಲಸಕ್ಕೆಂದು ಹೊರಟುನಿಂತಾಗ.
ವಸುಗೆ ಸಿಕ್ಕ ಪ್ಯಾಕೇಜು ನಂಗ ದಂಗ ಬಡಸಿತ್ತು. ಅಷ್ಟು ಪಗಾರದ ಕನಸು ಸಹ ನಾ ಕಂಡಿರಲಿಲ್ಲ. ಪ್ರಮೋದಗೂ ಅಂತಹ ದೊಡ್ಡ ಪಗಾರ ಇರಲಿಲ್ಲ. ಈಗ ಅವಗ ಮದುವಿ ಆಗಿತ್ತು.ಹೆಂಡತಿ ಅವನಿಗೆ ಅನುರೂಪ ಆಗಿದ್ದಳು ಅದಕಿಂತಾ ಅತ್ತಿ ಜೋಡಿ ಛಲೋ ಹೊಂದಿಕೊಂಡಿದ್ದಳು. ಬೆಂಗಳೂರಿಗೆ ಹೋದ ಹೊಸದರಲ್ಲಿ ವಾರಕ್ಕೊಮ್ಮೆ ಬರತಿದ್ದ ವಸು ಕ್ರಮೇಣ ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಬರತೊಡಗಿದಳಯ. ಇದಕ್ಕ ಮುಖ್ಯ ಕಾರಣ ಅಕಿ ಬಂದಾಗೆಲ್ಲ ರಮಾ ತಾನು ಕಲೆಹಾಕಿದ ವರಗಳ ಫೋಟೋ,ಕುಂಡಲಿ ಅಕಿ ಮುಂದ ಹರವತಿದ್ದಳು. ಮದುವಿ ಆಗು ಅನ್ನುವ ಅವಳ ಒತ್ತಾಯ ಜೋರಾಗಿತ್ತು. ಯಾಕೋ ವಸು ಆ ವಿಷಯದಾಗ ನಿರಾಸಕ್ತಿ ತೋರಸತಾಳ ಅನ್ನೊ ಭಾವ ನಂಗೂ ಬಂತು. ಕೇಳಿದೆ. ಅಕಿ ತನ್ ಕರಿಯರ್ ಗೋಲುಗಳು, ಮುಂದ ತಾನು ಪಡೆಯಬೇಕೆಂದಿರುವ ಸ್ಥಾನಮಾನಗಳ ಬಗ್ಗೆ ಹೇಳಿಕೊಂಡಳು. ಈ ಸಧ್ಯ ಮದುವಿ ಬೇಡ ಇದು ಅವಳ ಖಚಿತ ನಿಲುವಾಗಿತ್ತು.ನನಗೂ ಅಕಿ ಮಾತು ಪಟಾಯಿಸಿ ಅವಳ ಪರ ವಾದ ಹಾಕಿದೆ. ಈ ವಿಷಯದಾಗೂ ನಾನು ವಸುಳ ಪರ ನಿಂತಿದ್ದು ರಮಾಗೆ ಸೇರಿರಲಿಲ್ಲ. ಒಂದು ಪ್ರಾಜೆಕ್ಟ ನಿಮಿತ್ತವಾಗಿ ಅಮೇರಿಕಾಕ್ಕೆ ಹೋಗಬೇಕಾಗಿ ಬಂದಿದೆ ಅಂತ ವಸು ಹೇಳಿದಾಗ ಖುಶಿಯಾಗಿತ್ತು ಆದರ ರಮಾ “ಮದುವಿ ಮಾಡಕೊಂಡು ಎಲ್ಲಾದರೂ ಹೋಗು,ಗಂಡ ಒಪ್ಪಿಗಿ ಕೊಟ್ರ” ಅನ್ನುವ ಮಾತಿಗೆ ವಸು ತಿರುಗಿ ನಿಂತಳು. ತಾನು ಹೊರಟಿದ್ದು ಕೆಲಸದ ಸಲುವಾಗಿ..ಇದು ತನ್ನ ಶಾಣ್ಯಾತನಕ್ಕ ಸಿಕ್ಕ ಪ್ರತಿಫಲ ಅಂತೆಲ್ಲ ವಾದ ಹೂಡಿದಳು. ಅವಳ ವಾದದಾಗ ಹುರುಳಿತ್ತು. ಅಮೇರಿಕಾದಾಗ ಆರುತಿಂಗಳು ಕಳೆದು ಬಂದವಳಿಗೆ ಕಂಪನಿ ಪ್ರಮೋಶನ ನಿಡಿ ಗೌರಿಸಿತ್ತು ಹಂಗ ಕೆಲಸದ ನಿಮಿತ್ತ ಜರ್ಮನಿ, ಫಿನಲೆಂಡ ಹಿಂಗ ಬ್ಯಾರೆ ದೇಶಗಳಿಗೂ ಅಕಿ ಹೋಗಿಬಂದಳು. ನನ್ನ ಎದೆ ಅಭಿಮಾನದಿಂದ ಉಬ್ಬಿ ಹೋಗಿತ್ತು.

ಈ ಎಲ್ಲದರ ನಡುವೆ ಅಪಶೃತಿ ಕೇಳಿದ್ದು ತಿಂಗಳ ಹಿಂದ. ವಸು ಧಾರವಾಡಕ್ಕ ಬರದ ಬಹಳ ದಿನಾ ಆಗಿದ್ದವು. ಸೊಸೆಯ ಸಂಬಂಧಿ ಒಬ್ಬ ತಂದ ಸುದ್ದಿ ಹೀಗಿತ್ತು. ಪುಲಕಿತ್ ರಸ್ತೋಗಿ ಅನ್ನುವವನ ಜೋಡಿ ವಸು ಮದುವೆಯಾಗದೇ ಒಂದೇ ಮನೆಯಲ್ಲಿದ್ದಾಳೆ ಅದಕ್ಕ ಲಿವಇನ್ ರಿಲೇಶನ್ ಅಂತ ಹೆಸರು. ಈ ಸುದ್ದಿ ಎಲಾರಿಗೂ ಆಘಾತ ತಂದಿತ್ತು.ನನಗೂ ವಿಚಿತ್ರ ಅನಿಸಿತ್ತು.ಅವಳು ಈ ನಿರ್ಧಾರ ತಗೊಳ್ಳುವ ಮೊದಲು ಯಾರಿಗೂ ತಿಳಸಿರಲಿಲ್ಲ. ಏನ ವಿಷಯ ಇದ್ದರೂ ನನ್ನ ಜೋಡಿ ಮಾತಾಡಾಕಿ ಹಿಂಗ್ಯಾಕ ಮಾಡಿದಳು.ರಮಾ ಅಂತೂ ನೀವು ಮಾಡಿದ ಅಚ್ಛಾದ ಪ್ರಭಾವ ಇದು ಅಂತ ಫರ್ಮಾನು ಹೊರಡಿಸಿದಳು. ತಂಗಿ ಹಿಂಗ ಭಾನಗಡಿ ಮಾಡಿಕೊಂಡಾಳ ಅಂತ ಊರಾಗ ಗೊತ್ತಾದರ ನಾ ಹೆಂಗ ಉತ್ತರಿಸಲಿ ಇದು ಮಗನ ಅಳಲು. ಮನೆತನದ ಹೆಣ್ಣುಮಗಳು ಇಂತಹ ದಾರಿ ತುಳದಾಳ ನಾಳೆ ತನ್ನ ಮಕ್ಕಳ ಜೀವನದ ಮ್ಯಾಲೂ ಇದರ ಪರಿಣಾಮ ಆಗತದ ಇದು ಸೊಸಿಯ ದಿಗಿಲು. ವಸು ಹಿಂಗ ನಿರ್ಧಾರ ತಳದದ್ದು ಅದೂ ಒಂದೂಮಾತು ತಿಳಸದ ಇದ್ದಿದ್ದು ನನಗೂ ಬ್ಯಾಸರಿಕಿ ತರಿಸಿತ್ತು. ಮದುವಿ ಮಾಡಿಕೊಂಡಿದ್ರ ಆ ಮಾತು ಬ್ಯಾರೆ ಆದರ ಹಿಂಗ ಲಿವಇನ್ ಇದೆಂತಹ ಸಂಬಂಧ..ವಸು ಯಾಕ ಇದಕ ಒಪ್ಪಿಕೊಂಡಳು..ಫೋನು ಮಾಡಿದೆ. ಶಾಂತವಾಗಿ ಉತ್ತರಿಸಿದಳು. ಒಪ್ಪಿಕೊಂಡಳು. ಪುಲಕಿತ ಜೊತೆ ಧಾರವಾಡಕ್ಕೆ ಬಂದು ವಿಷಯ ತಿಳಿಸಬೇಕು ಅಂದುಕೊಂಡಿದ್ದಳಂತೆ. ಯಾಕೋ ಅವಳ ಮಾತಿನಲ್ಲಿ ಧೈರ್ಯಕಿಂತ ಭಂಡತನದ ವಾಸನೆ ಬಂತು. ಮನೆಯಲ್ಲಿ ದೀರ್ಘ ಚರ್ಚಾ ಆತು. ವೆಂಕಣ್ಣನೂ ಬಂದ. ಎಲ್ಲರ ಅಭಿಪ್ರಾಯ ಒಂದೇ..ವಸುಗೆ ಸಿಕ್ಕ ವಿಪರೀತ ಸಲಿಗೆಯ ಪರಿಣಾಮ ಇದು.ನಾ ಅಪರಾಧಿಯ ಜಾಗೆಯಲ್ಲಿ ನಿಂತಿದ್ದೆ. ವಸುಗೆ ಸಮಜಾಯಿಷಿ,ಸಾಧ್ಯವಾದರೆ ಕೆಲಸ ಬಿಡಿಸಿ ಧಾರವಾಡಕ್ಕೆ ವಾಪಸ ಕರೆತರುವುದು ..ಇದಕ್ಕೆ ನಾನು ಬೆಂಗಳೂರಿಗೆ ಹೋಗಬೇಕು ಅಂತ ಠರಾವಾತು.

ಮಗಳು:
“ಆರ್ ಯು ಸ್ಟಿಲ್ ಎ ವರ್ಜಿನ್ ..?” ಪ್ರಶ್ನೆಕೇಳಿದವನ ಮುಖದಲ್ಲಿ ಅಸಮಾಧಾನದ ಛಾಯೆ ಎದ್ದು ಕಾಣುತ್ತಿತ್ತು. ಎತ್ತಿ ಆಡಿಸಿದವನ ಬಾಯಲ್ಲಿ ಈ ಪ್ರಶ್ನೆ ಕೇಳುವುದು ವಿಚಿತ್ರ ಹಾಗೂ ಅಸಹ್ಯವೂ…

“ನಿಂಗ ಹೇಳಲಿಕ್ಕೆ ಮುಜುಗರ ಆಗತದ ಗೊತ್ತು ನಾ ಅವಗ ಕೇಳತೇನಿ ಅವಗರೆ ಧೈರ್ಯ ಅದನೋ ಇಲ್ಲೊ ಗೊತ್ತಿಲ್ಲ…”ಅಪ್ಪನ ದನಿಯಲ್ಲಿನ ಈ ಜೋರು ಹೊಸದಾಗಿತ್ತು. ಪುಲಕಿತ ಹೇಳಿದ್ದ ಆರ್ಥಡಾಕ್ಸ ಕುಟುಂಬ ಅಂತಿ ನಿಮ್ಮದು ಹೆಂಗ ತಗೋತಾರೋ ಈ ವಿಷಯ ಅಂತ. ಲಿವ್ ಇನ್ ಸಂಬಂಧ ಒಪ್ಪಿಕೊಳ್ಳುವುದು ಸುಲಭದ ಮಾತು ಆಗಿರಲಿಲ್ಲ ಒಪ್ಪತೇನಿ ಆದರ ಅಪ್ಪನ ಮ್ಯಾಲೆ ಯಾಕೋ ನಂಬಿಕಿ ಇತ್ತು ಆದರ ಅವನ ಈಗ ಇಂತಹ ಮಾತು ಹೇಳಿದ. ಬಹುಶಃ ನನಗ ಕುಗ್ಗಸಲಿಕ್ಕೆ ಇಂತಹ ಮಾತು ಹೇಳಿರಬೇಕು. ಈಗ ನಾ ಬಗ್ಗಿದರ ಕಥಿ ಮುಗದಂಗ..

“ಅದು ಆಬಿವೀಯಸ್ ಅಲ್ಲ ಅಪ್ಪ ನಾನು ಮತ್ತು ಪುಲಕಿತ ಎರಡು ತಿಂಗಳಿಂದ ಜೋಡಿ ಇದ್ದೇವಿ.. ಕೆಲವೊಮ್ಮೆ ತೋಲ ತಪ್ಪತದ..ಆದರ ಪ್ರಿಕಾಶನ ತಗೊಂಡೇನಿ..” ಆಡುತ್ತಿದ್ದಂತೆ ನಾಲಿಗೆ ಕಚ್ಚಿಕೊಂಡೆ. ನೇರವಾಗಿ ಮುಖ ನೋಡಲಾರದೆ ತಲೆ ತಗ್ಗಿಸಿದೆ.

“ಇದೊಂದು ಕೇಳೋದು ಬಾಕಿ ಇತ್ತು..ಯಾಕ ಹಿಂಗ ನಿರ್ಧಾರ ಮಾಡಿದಿ..ಅದೇನು ಅನಿವಾರ್ಯ ಇತ್ತು..ಹಡದವರಿಗೆ ಒಂದು ಮಾತು ತಿಳಸದಂಗ.. ಇಷ್ಟು ದೊಡ್ಡಾಕಿ ಯಾವಾಗ ಆದೀ ನೀನು..ಏನೋ ನಾಕು ದುಡ್ಡು ಹೆಚಿಗಿ ಗಳಸತಿ ಅಂದ್ರ ಮನಮಾನಿ ಮಾಡಬೇಕೇನು..”..

ಯಾಕೋ ಕುಸಿದುಹೋಗುತತಿರುವ ಭಾವ..ಇಷ್ಟುದಿನ ಇಲ್ಲದ ಈ ಅಪರಾಧಿಭಾವ ಬಂತಾದರೂ ಎಲ್ಲಿಂದ….ನಾ ಸೋಲಬಾರದು.

“ನೀ ಕೇಳಿದ್ದಕ್ಕ ಉತ್ತರ ಕೊಟ್ಟೆ ಅಷ್ಟೆ…” ಉತ್ತರ ಚುಟುಕಾಗಿತ್ತು. ಅಪ್ಪ ಇನ್ನೂ ಕೆರಳಿದ.

“ನೋಡು ನಮ್ಮದು ಸಾಧಾರಣ ಮನಿತನ. ಸಣ್ಣ ಮಂದಿ ನಾವು. ಒಂದು ಹುಡುಗ ಹುಡುಗಿ ಮದುವಿಯಾಗದ ಹಿಂಗ ಒಂದ ಮನಿಯೊಳಗ ಇರೂದನ್ನ ಒಪ್ಪುವಷ್ಟು ದೊಡ್ಡವರಾಗಿಲ್ಲ ನಾವು. ನಿಮ್ಮವ್ವನ ಬಗ್ಗೆರೆ ವಿಚಾರ ಮಾಡಬೇಕಾಗಿತ್ತು ನೀನು ಸುದ್ದಿ ತಿಳ್ದಾಗಿಂದ ಕುದ್ದು ಹೋಗ್ಯಾಳ ಅಕಿ. “

 ಅವನ ದನಿಯಲ್ಲಿ ದರ್ಪ ಮಾಯವಾಗಿ ನೋವು ಇಣುಕಿತ್ತು. ಒಂದು ದೀರ್ಘವಾಗಿ ಉಸಿರು ತಗೊಂಡೆ. ಅವ್ವ ಮತ್ತು ನಾನು ಎಂದಿಗೂ ಎರಡು ಹಳಿಗಳಂಗ ಉಳದು ಹೋದಿವಿ. ಬಹಳಸಲ ವಿಚರ ಮಾಡಿದ್ದೆ ..ನಾ ಹುಟ್ಟುವ ಮೊದಲು ಅವಳಿಗೆ ಗರ್ಭ ಕಟ್ಟಿಕೊಂಡಿದ್ರ ನಾ ಹುಟ್ಟುವ ಪ್ರಮೇಯವೇ ಬರತಿರಲಿಲ್ಲ. ಅದು ಮಾಡಬ್ಯಾಡ ಅಲ್ಲಿ ಕೂಡಬೇಡ ಹಿಂಗ ಮಾಡಬೇಡ ಹೆಣ್ಣುಮಕ್ಕಳು ಹಿಂಗ ಹಟ ಮಾಡಬಾರದು ಇವ ಮಾತುಗಳು..ಕೇಳಕೋತ ದೊಡ್ಡವಳಾದೆ. ಮುಟ್ಟಿನ ಆ ಮೂರು ದಿನ ನನಗ ಅಕ್ಷರಶಃ ನರಕ ಅನಿಸತಿತ್ತು. ಉಳದ ಗೆಳೆತಿಯರ ಮನೆಯಲ್ಲಿನ ಮೋಕಳೀಕ ವಾತಾವರಣ ಯಾಕ ನಮ್ಮನಿಯೊಳಗ ಇಲ್ಲ. ಈ ಅತಿ ಅನಸುವ ಶಿಸ್ತು ಯಾಕ ಅವ್ವಳಲ್ಲಿ.. ಒಂದ ಆಶಾ ಅಂದರ ಅಪ್ಪ ಯಾವಾಗಲೂ ಬೆನ್ನು ತಟ್ಟಿದ ಹುರಿದುಂಬಿಸಿದ.

“ಅವ್ವ ಯಾವಾಗ ನಾ ಮಾಡಿದ ಕೆಲಸಾ ಒಪ್ಪಿಕೊಂಡಾಳ..ಸಾದಾ ಜೋಡಿ ಓದುವ ಹುಡುUರು ತಮಗ ತಿಳಿಯದ್ದು ಕೇಳಲು ಫೋನುಮಾಡಿದರ ಸಂಶಯ ಬರತಿತ್ತು ಅಕಿಗೆ. ಅಕಿಯಿಂದ ಯಾವ ಪವಾಡದ ನಿರೀಕ್ಷಾ ಇಲ್ಲ ನನಗ. ಆದರ ನಿನ್ನ ಮಾತು ಬ್ಯಾಸರ ತರಿಸಿತು. ನೀ ಕೇಳಿದ ವರ್ಜಿನಿಟಿ ಪ್ರಶ್ನಿ ಹೇಸಿಗಿ ಅನಿಸಿತು.ನನಗ ಇಕ್ಕಟ್ಟಿನ್ಯಾಗ ಸಿಗಸಬೇಕು ಅಂತ ಮಾತ್ರ ಆ ಪ್ರಶ್ನಿ ನೀ ಕೇಳದಿ ಹೌದಲ್ಲೊ.?” 

ನೇರವಾಗಿ ನೋಡಿದೆ. ಈಗ ಮುಖ ತಿರುಗಿಸೋ ಸರದಿ ಅವಂದು, ಒಳಗೊಳಗ ಖುಶಿ ಅನಿಸಿತು. ಆದರ ಅಪ್ಪನ ಮುಂದ ಹಿಂಗ ಕೂತು ಇಂತಹ ವಿಚಾರ ಚರ್ಚಾಮಾಡುವಷ್ಟು ನಾ ಮುಂದಹೋದೆನೇ.. ಆದರ ಇದು ಅನಿವಾರ್ಯ ಗೆಲುವಿನ ಹಾದಿಯೊಳಗ ಇದೂ ಒಂದು ಹೆಜ್ಜಿ ಮಾತ್ರ.

ಧಾರವಾಡದ ಸಾದಾ ಸೀದಾ ವಾತಾವರಣದಿಂದ ಹೊರಬಂದ ನನಗೆ ಬೆಂಗಳೂರು ಅಕ್ಷರಶಃ ಸೆಳೆದಿತ್ತು. ಕೆಲಸ ಕಲಿಯುವ ಉತ್ಸಾಹ, ಮಾಡಿದ ಕೆಲಸ ಗುರುತಿಸಿ ಕಂಪನಿ ಕೊಟ್ಟ ಪ್ರೋತ್ಸಾಹದಾಗ ದಿನ ಹೆಂಗ ಹೋದವೋ ಗೊತ್ತಾಗಲಿಲ್ಲ.ಕೆಲಸ ಮಾಡಿದ್ದು ಗಮನಿಸಿ ಬೆನ್ನು ಚಪ್ಪರಿಸಿದಾಗ ಸಿಗುವ ಮಜಾ ಒಂದ ನಮೂನಿ ಅಮಲು ತರತದ. ಅಷ್ಟು ದುಡ್ಡು ನಾ ಎಂದೂ ನೋಡಿರಲಿಲ್ಲ.ಪಗಾರ ಇನ್ನೂ ಹೆಚ್ಚಾಗಬೇಕು, ಟೀಮಲೀಡ್ ಆಗಬೇಕು,ಪ್ರಾಜೆಕ್ಟ ಮ್ಯಾನೇಜರ ಆಗಬೇಕು ಆನಸೈಟ್ ಕೆಲಸಕ್ಕ ಹೊರದೇಶಕ್ಕ ಹೋಗಬೇಕು ಬರೇ ಇವೇ ವಿಚಾರಗಳು.ಸುತ್ತಲಿನ ಕೊಲೀಗ್ಸ ಸಹ ಇವೇ ಮಾತಾಡುವವರು. ಊರಿಗೆ ಹೋದಾಗ ಅವ್ವ ಹೇಳುತ್ತಿದ್ದ ವರಗೋಳ ಪ್ರಸ್ತಾಪ ಈ ಕರಿಯರ್ ಹಪಾಪಿತನದ ಮುಂದ ಗೌಣ ಆಗಿ ತೋರತಿತ್ತು. ಮದುವಿ ಅಂತ ಆದ್ರ ಕರಿಯರ್ ಗೋಲು ಮರೀಬೇಕು ಗಂಡ, ಸಂಸಾರ ಹಿಂಗ ವ್ಯಾಪ ಬೆಳೀತದ..ಹಿಂಗಾಗಿ ಅವ್ವನ ಮಾತಿಗೆ ಕ್ಯಾರೆ ಅನಲಿಲ್ಲ.ಅಪ್ಪ ಸಪೋರ್ಟಿಗೆ ನಿಂತ ಹಿಂಗಾಗಿ ಅವಗ ನಾ ಸದಾ ಆಭಾರಿ ಇಲ್ಲವಾದರೆ ನಂದೂ ದೀಪಾಲಿಯ ಕೇಸೇ ಆಗುತ್ತಿತ್ತು.

ದೀಪಾಲಿ ಮೆಹತಾ ಜೋಡಿ ಕೆಲಸ ಮಾಡಾಕಿ.ಮುಂಜಾನೆದ್ದು ಅಕಿ ಮುಖ ಬಾಡಿದ್ರ ಹಿಂದಿನ ರಾತ್ರಿ ಫೋನಿನ್ಯಾಗ ಅಕಿ ಅಪ್ಪ ಅವ್ವನ ಜೋಡಿ ಜಗಳಾ ಮಾಡಿಕೊಂಡಾಳ ಅಂತ ಅರ್ಥ. ಕಾಫಿ ಕುಡಿಯಲು ಹೋದಾಗ ಸಿಗರೇಟಿನ ಹೊಗೆ ಉಗುಳುತ್ತ ಅಕಿ ಎಲ್ಲಾ ಹೇಳಕೋತಿದ್ದಳು.ಅಪ್ಪ ಅಮ್ಮ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ ಹುಡುಗ ತಂದೆಯ ಸ್ನೇಹಿತರ ಮಗ ಬಿಸಿನೆಸ್ ಮಾಡುತ್ತಿದ್ದಾನೆ.ಮದುವೆ ಆದಮೇಲೆ ಕೆಲಸ ಬಿಡಬೇಕು ಇದು ಅವರ ಒತ್ತಾಯ..ಅವಳ ಅಪ್ಪ ಅಮ್ಮ ಇದಕ್ಕೆ ಬೆಂಬಲ ಕೊಡುತ್ತಾರೆ..ದೀಪಾಲಿಗೆ ಕೆಲಸದ ಮೇಲೆ ವಿಪರೀತ ಪ್ರೀತಿ..ತಾನು ಮದುವೆಯಾದ ಮೇಲೆ ಕೆಲಸ ಬಿಡುವುದಿಲ್ಲ ಇದು ಅವಳ ವಾದ. ದಿನಾರಾತ್ರಿ ಇದೇ ವಿಷಯವಾಗಿ ಅವಳ ಅಪ್ಪ ಅಮ್ಮನ ಜೊತೆ ಜಗಳಾಡುತ್ತಿದ್ದಳು. ಕೊನೆಗೊಂದು ದಿನ ತುಂಬಿ ಬಂತು ವಾಸಿಸುತ್ತಿದ್ದ ಪಿಜಿಯ ಟೆರೇಸ ಮೇಲಿಂದ ಜಿಗಿದು ಪ್ರಾಣ ಕೊಟ್ಟಳು.

ಕರಿಯರ್ ಗೆ ಹೋಲಿಸಿದರೆ ಮದುವೆ ಎರಡನೇ ಆಯ್ಕೆ.ಯಾಗಿತ್ತು. ಹಾಗೆಯೇ ಇದು ಅನಿವಾರ್ಯಅಂತ ಅನಿಸಲಿಲ್ಲ. ಅದು ಅಡ್ಡಿ ಅನ್ನುವ ಭಾವ ಮಾತ್ರ ಪಕ್ವ ಆತು.ಪುಲಕಿತ ಅಮೇರಿಕಾದ ಪ್ರಾಜೆಕ್ಟ ನಲ್ಲಿ ಜೊತೆಯಾದವ ನನಗಿಂತ ಹತ್ತುವರ್ಷ ದೊಡ್ಡವ. ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಹೆಚ್ಚಿಗೆ ಮಾತಾಡುತ್ತಿರಲಿಲ್ಲ. ನಾನೇ ಕೆದಕಿ ಕೇಳಿದಾಗ ಹೇಳಿದ. ಮದುವೆಯಾಗಿತ್ತು ಅವನಿಗೆ ಅವಳ ಜೊತೆ ದಿನಾನೂ ಕಿರಿಕಿರಿಯ ಬಾಳು. ಸುಖ ಇರಲಿಲ್ಲ. ಇವನ ತಂದೆ ತಾಯಿಗೂ ಈ ಮದುವೆಯಿಂದ ಸುಖ ಇರಲಿಲ್ಲ..ಅಷ್ಟಕ್ಕೆ ಅವಳು ನಿಲ್ಲಲಿಲ್ಲ.. ಹೆರೆಸಮೆಂಟ್ ಕೇಸು ಜಡಿದಳು.ಪರಿಚಯದ ಪೋಲಿಸ ಅಧಿಕಾರಿಗೆ ದುಡ್ಡು ತಿನ್ನಿಸಿ ಇವರು ಬಚಾವಾದರು. ಗಾಯದ ಕಲೆ ಹಾಗೆ ಉಳೀತು. ಮತ್ತೆ ಮದುವೆಯಾಗಲಾರೆ ಅಂತ ಅವನ ನಿರ್ಧಾರ. ನಾನೂ ದ್ವಂದ್ವದಲ್ಲಿದ್ದೆ ಯಾಕೋ ಮದುವೆ ಇದು ನನ್ನ ಕೆಲಸದ ಗುರಿಗಳಿಗೆ ಅಡ್ಡಿಯಾಗುತ್ತದೆ ಅಂದಾದರೆ ಅದು ಬೇಕೇ ಈ ಪ್ರಶ್ನೆಗೆ ನನಗೂ ಉತ್ತರ ಸಿಕ್ಕಿರಲಿಲ್ಲ. ಅವನ ಹಾಗೂ ನನ್ನ ನಡುವಿನ ಅಂತರ ಕಮಿಯಾಗತೊಡಗಿತು.ನಮ್ಮ ಈ ಸಂಬಂಧಕ್ಕೆ ಒಂದು ಹೆಸರು ಕೊಡಬೇಕಾಗಿತ್ತು. ಅವಾಗ ಹೊಳೆದಿದ್ದು ಈ ಲಿವ್ ಇನ್ ..ಆರುತಿಂಗಳು ಒಟ್ಟಿಗೆ ಇರೋದು ಎಲ್ಲ ಹೊಂದಿದರೆ ಮುಂದೆ ಮದುವೆಯ ಬಂಧನ ಅಂತ ಪರಸ್ಪರ ನಿರ್ಧಾರ ಮಾಡಿಕೊಂಡೆವು. ಪರಸ್ಪರ ಒಪ್ಪಿಕೊಂಡು ಮಾಡಿದ ಕ್ರಿಯೆ ಹೀಗಾಗಿ ಸೆಕ್ಸ ಬಗೆಗೂ ಗೊಂದಲಗಳಿರಲಿಲ್ಲ.
ಇದು ಕಥೆ. ಅಪ್ಪನಿಗೆ ಹೇಳಿದೆ. ಶತಪಥ ತಿರುಗುತ್ತಿದ್ದ ಅವ ರೂಮಿನ ತುಂಬ. ನನ್ನ ಒಳಗು ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ನನಗೆ ತೋಡಿಕೊಂಡ ವಿಚಿತ್ರ ಸಮಾಧಾನ.

ಉಪಶಾಂತಿ:
ವಾಪಸ್ಸು ಧಾರವಾಡಕ್ಕೆ ಹೋಗಲು ಅಪ್ಪ ಗಾಡಿ ಹತ್ತಿಕುಳಿತಿದ್ದಾನೆ. ಡಬ್ಬಿಯ ತುಂಬ ಪರಿಚಿತ ಮುಖಗಳೇ ಇವೆ ಯಾರಾದರೂ ಬಂದು “ಏನು ನಿಮ್ಮ ಮಗಳ ರಾಮಾಯಣ..ನೀವಾದರೂ ಬುದ್ಧಿ ಹೇಳಬೇಕಿಲ್ಲೊ…” ಅಂತ ಅಂತಾರೇನೋ ಅನ್ನುವ ಆತಂಕ. ಬುದ್ದಿ ಹೇಳಿ ಮಗಳಿಗೆ ವಾಪಸ ಕರೆದುಕೊಂಡು ಹೋಗೋ ಯೋಜನೆ ವಿಫಲ. ಹೆಂಡತಿಗೆ ಫೋನು ಮಾಡಿದಾಗ “ಗಿಡವಾಗಿ ಬಗ್ಗದ್ದು ಮರವಾಗಿ ಹೆಂಗ ಬಗ್ಗತದ..ನಿಮ್ಮ ಅಚ್ಛಾ ಎಲ್ಲಾ ಕೆಡಿಸಿತು..” ಅಂತ ಚುಚ್ಚಿದಳು. ಸೋಲು ಇದು ಒಪ್ಪಿಕೋಬೇಕು ಖರೆ. ಆದ್ರ ಈ ಸೋಲಿಗೆ ಇನ್ನೊಂದು ಆಯಾಮ ಅದ. ಮಕ್ಕಳ ಮದುವಿ ವಿಷಯದಾಗ ನಾವು ಯಾಕ ಇನ್ನೂ ಪೊಸೆಸಿವ್ ಆಗತೇವಿ..ನಾವು ಯೋಚಿಸಿದ್ದು ಮಾತ್ರ ಖರೆ ಅನ್ನುವ ವಿಚಿತ್ರ ರೋಗ ಯಾಕ ಬರತದ. ಮಗಳು ಹೇಳಿದ ದೀಪಾಲಿಯ ಕತೆ ನೆನಪಾತು. ಎದೆ ಕರಗಿತು.ಒಂದು ಹಂತ ಬಂದಾಗ ಅವರಿಗೆ ನಿರ್ಧಾರದ ಸ್ವಾತಂತ್ರ ಕೊಡಬೇಕು..ಅದರ ಸಾಧಕ ಬಾಧಕ ಅವರ ವಿಚಾರಮಾಡಬೇಕು.
ಕೊರಕಲಿದೆ ಖರೆ..ಆದ್ರ ಹೆಜ್ಜಿ ಮುಂದ ಇಡದ ಹೋದರ ದಾಟುವುದು ಹೆಂಗ..ನಾವ ಮೊದಲ ಹೆಜ್ಜಿ ಹಾಕಿದರಾತು..ದಾಟುವುದು ಸರಳ ಆಗತದ ಅವಾಗ.ರಮಾಗ ತಿಳಿಸಿ ಹೇಳಬೇಕು..ದಾಟಲು ಹೆಜ್ಜಿ ಎತ್ತಿಡಲು ಹೇಳಬೇಕು.ಹೊಸಾದು ಕಲಿಸಬೇಕು…


ಸೋಮವಾರ, ಡಿಸೆಂಬರ್ 18, 2017

ಗೋಡೆಗಳ ದಾಟುತ್ತ...



ಅಂದು ಬೆಳಿಗ್ಗೆಯೇ ದತ್ತಣ್ಣಿ ತನ್ನ ಗೆಳೆಯ ದಸ್ತಗೀರನಿಗೆ ಫೋನು ಮಾಡಲು ಎರಡು ಕಾರಣಗಳಿದ್ದವು. ಅಂದು ದಸ್ತಗೀರನ ಹುಟ್ಟಿದಹಬ್ಬ ಅಂತೆಯೇ ನಿನ್ನೆ ಎಲ್ಲ ಟಿವಿ ಚಾನಲಗಳಲ್ಲಿ ಬಂದ ದಸ್ತಗೀರನ ಸಂದರ್ಶನ. ಗೆಳೆಯನ ಉತ್ತರಕ್ಕೂ ಕಾಯದೇ ಭೆಟ್ಟಿಯಾಗಲು ಬರುವುದಾಗಿ ಹೇಳಿ ಫೋನು ಇಟ್ಟ. ಕೇವಲ ಅಸೀೀಪನ ತಂದೆ ಆಗಿದ್ದಕ್ಕಾಗಿ ಅವ ಕೇಳಬಾರದ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿತ್ತು,ಮಾತ್ರವಲ್ಲ ಮಗ ಹೀಗೆ ಮಾಡಿದ ಅದಕ್ಕೆ ನನಗೇಕೆ ಈ ಶಿಕ್ಷೆ ಎಂಬ ಅವನ ಅಳಲು ಮೂಕರೋದನವಾಗಿತ್ತು. ಅಸೀಫನಿಗೆ ದೆಹಲಿಯಿಂದ ಬಂದ ವಿಶೇಷತಂಡದವರು ಅಪರಾತ್ರಿ ಕರಕೊಂಡು ಹೋಗಿದ್ದರು. ಗೋವಾದಲ್ಲಿ ಈ ಹಿಂದೆ ಬಂಧಿತನಾದ ಕಾಸಿಂ ಎಂಬಾತ ಅಸೀಫನ ಹೆಸರೂ ತಗೊಂಡಿದ್ದ. ಕಾಸಿಂ ದೇಶದತುಂಬ ವಿಧ್ವಂಸಕ ಕೆಲಸದ ಪ್ಲಾನ ಮಾಡಿದವರ ಗುಂಪಿನಲ್ಲಿದ್ದ. ಕೆಲದಿನದ ಹಿಂದೆ ಹುಬ್ಬಳ್ಳಿಗೂ ಅವ ಬಂದಿದ್ದ ಹಾಗೆಯೇ ಅಲ್ಲಿಯ ಮಸೀದಿಯಲ್ಲಿ ಅಸೀಫ ಹಾಗೂ ಇತರೇ ಹುಡುಗರ ಜೊತೆ ಭೆಟ್ಟಿಯಾಗಿದ್ದ ಒಂದು ಸ್ಲೀಪರಸೆಲ್ ಹುಬ್ಬಳ್ಳಿಯಲ್ಲೂ ತಯಾರಾಗುವ ಹಂತದಲ್ಲಿತ್ತು ಅಸೀಫ ಅದರ ಮುಖ್ಯಸ್ಥನ ಜವಾಬದಾರಿ ಹೊತ್ತಿದ್ದ ಅಂತ ಚಾನೆಲನಲ್ಲಿ ಬಿತ್ತರವಾದ ಸುದ್ದಿ. ಟಿವಿಯವರು ದಸ್ತಗೀರನಿಗೆ ಸುತ್ತುವರೆದು ಪ್ರಶ್ನೆಗಳ ಕೇಳಿದ್ದರು. ಮಗನ ಈ ಚಟುವಟಿಕೆಗಳ ಬಗ್ಗೆ ಅವನಿಗೆ ಗೊತ್ತಿಲ್ಲ ಎಂಬ ಅವನ ವಿವರಣೆ ಮಾಧ್ಯಮದವರಿಗೆ ತೃಪ್ತಿತಂದಿರಲಿಲ್ಲ. ಸಮಜಾಯಿಶಿ ಕೊಟ್ಟು ಕೊಟ್ಟು ಸುಸ್ತಾದವ ಅಳಲು ತೊಡಗಿದ. ಚಾನಲನಲ್ಲಿ ಗೆಳೆಯ ಅಳುತ್ತಿರುವ ದೃಶ್ಯ ದತ್ತಣ್ಣಿಗೆ ನೋವು ತರಿಸಿತ್ತು. ಕೂಡಲೇ ಫೋನಮಾಡಿ ಗೆಳೆಯನಿಗೆ ಸಮಾಧಾನ ಹೇಳುವ ಅವನ ಆಸೆಗೆ ನೀರುಎರಚಿದ್ದು ಹೆಂಡತಿ ಮತ್ತು ಮಗ ಅನಂತ. ಅನಂತನಿಗೆ ಅಪ್ಪನ ಈ ಗೆಳೆತನ ಮನಸ್ಸಿಗೆ ಬರುತ್ತಿರಲಿಲ್ಲ. ಅನೇಕ ಸಲ ಅಪ್ಪನ ಜೊತೆ ಈ ಬಗ್ಗೆ ವಾದಮಾಡಿದ್ದ. ಆ ಜನರ ಸ್ನೇಹ ಸಹವಾಸ ಬೇಡ ಇದು ಅವನ ವಾದ. ಅವನ ಮಾತು ಮೀರಿ ದತ್ತಣ್ಣಿ ಸ್ನೇಹ ಇಟ್ಟುಕೊಂಡಿದ್ದ.  ಹಾಗೆ ನೋಡಿದರೆ ದತ್ತಣ್ಣಿಯ ತಂದೆ ಮತ್ತು ಅಸೀಫನ ತಂದೆಯೂ ಗೆಳೆಯರು,ಇಬ್ಬರೂ ರೇಲ್ವೆವರ್ಕಶಾಪಿನಲ್ಲಿಜೊತೆಗೆ ಕೆಲಸ ಮಾಡುವವರು. ತಮ್ಮ ಮಕ್ಕಳು ಒಂದೇ ಸಾಲೆಯಲ್ಲಿ ಕಲಿಯಲಿ ಎಂಬ ಅವರ ಬಯಕೆ ಕೈಗೂಡಿತ್ತು. ಕನ್ನಡ ಎರಡನೇ ನಂಬರ ಸಾಲೆಯಿಂದ ಹಿಡಿದು ಪಿಯುಸಿ ಎರಡನೇ ವರ್ಷದವರೆಗೂ ದತ್ತಣ್ಣಿ ಮತ್ತು ದಸ್ತಗೀರ ಜೊತೆಯಾಗಿ ಕಲಿತವರು. ದಸ್ತಗೀರನ ತಂದೆ ಕೆಲಸದಲ್ಲಿದ್ದಾಗಲೇ ತೀರಿಕೊಂಡಾಗ ಅನುಕಂಪದ ಆಧಾರದ ಮೇಲೆ ದಸ್ತಗೀರ ನಿಗೆ ರೇಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ದತ್ತಣ್ಣಿಯ ಅವ್ವನಿಗೂ ದಸ್ತಗೀರನ ಮೇಲೆ ಅಭಿಮಾನ..ದೀಪಾವಳಿ ಹಬ್ಬಕ್ಕೆ ಫರಾಳ ತಿನ್ನಲು ಅವ ಹಾಜರಾಗಬೇಕು. "ನೀವು ಬ್ರಾಂಬ್ರು ಭಾರಿ ರುಚಿಯಾಗಿ ಮಾಡತೀರಿ.." ಅಂತ ಹೊಗಳುತ್ತ ಒಂದೆರಡು ಉಂಡಿ ಹೆಚ್ಚಿಗೆಯೇ ಅವ ತಿನ್ನುವುದಿತ್ತು.ಹಂಗ ಮೊಹರಂ ಹಬ್ಬದ ಚೊಂಗೆ, ಈದ್ ಹಬ್ಬದ ಸುರಕುಂಬ, ಬಿರಿಯಾನಿ ಅಂದರೆ ದತ್ತಣ್ಣಿಗೆ ಪಂಚಪ್ರಾಣ.


ಹುಬ್ಬಳ್ಳಿಯ ಉಣಕಲ್ ಕೆರೆ ಅನೇಕಸಲ ಬತ್ತಿ ತುಂಬಿ ತುಳುಕಿತ್ತು. ಊರಲ್ಲಿ ಹಿಂದು ಮುಸ್ಲಿಂರ ದಂಗೆ ನಡೆಯುತ್ತಿದ್ದವು ಅದು ಬಾಬರಿ ಮಸೀದಿಯ ಗಲಾಟೆ ಇರಬಹುದು, ಈದಗಾದ ಝಂಡಾಹಾರಿಸುವ ವಿಚಾರ ಇರಬಹುದು ಅಥವಾ ಪ್ರತಿವರ್ಷ ಹಟಕೂನ ನಡೆಯುವ ಂಗಪಂಚಮಿಯ ಧಾಂಧಲೆ ಇರಬಹುದು ,ಇಡೀ ಊರು ಹೊತ್ತಿ ಉರಿಯುತ್ತಿದ್ದರೂ ಇವರಿಬ್ಬರ ಗೆಳೆತನಕ್ಕೆ ಅದು ಅಡ್ಡಿ ಬಂದಿರಲಿಲ್ಲ.ದತ್ತಣ್ಣಿ ವಾಸವಾಗಿದ್ದುದು ಕಿಲ್ಲೆಯಲ್ಲಿ. ಅವನ ಮನೆಯಿಂದ ಅನತಿ ದೂರದ ಪತ್ಥರಪೋಡ ಗಲ್ಲಿಯಲ್ಲಿ ದಸ್ತಗೀರ ಇರತಿದ್ದ,

ದಸ್ತಗೀರನ ಜೊತೆಗಿನ ದತ್ತಣ್ಣಿಯ ಈ ಗೆಳೆತನ ಕಿಲ್ಲೆಯ ಉಳಿದ ಮಂದಿಗೆ ಸರಿಬಂದಿರಲಿಲ್ಲ. ಹೇಳಿಕೇಳಿ ಕಿಲ್ಲೆದ ಜನ ಸನಾತನವಾದಿಗಳು ಅಂತ ಹೆಸರಾದವರು.  ಮನಿಗೆ ಬಂದು ಹೇಳಿಹೋದರು. ಕೆಲವೊಮ್ಮೆ ತಾಕೀತು ಮಾಡಿದರು ಕೂಡ. ದತ್ತಣ್ಣಿ ಕೇಳಿಯೂ ಕೇಳದಂತೆ ಇದ್ದ. ಹಂಗ ಪತ್ಥರಪೋಡ ಗಲ್ಲಿಯ ಹಿರಿಯರಿಗೂ ದಸ್ತಗೀರನ ಈ ಕಾಫಿರನ ಜೊತೆಗಿನ ಸ್ನೇಹ ಸರಿಬಂದಿರಲಿಲ್ಲ. ಅವ ಶುಕ್ರವಾರದ ನಮಾಜಿಗೆ ಹೋದಾಗ ಅವನ ಸುತ್ತುವರಿದು ಬುದ್ಧಿವಾದ ಹೇಳತಿದ್ದರು.ಆದರ ಇಬ್ಬರೂ ಗೆಳೆಯಂದರು ಮಂದಿ ಮಾತಿಗೆ ತಲಿ ಕೆಡಿಸಿಕೊತಿರಲಿಲ್ಲ. ಪ್ರತಿತಿಂಗಳ ಹತ್ತರ ನಂತರ ಗೆಳೆಯರಿಬ್ಬರೂ ದಾಜೀಬಾನ ಪೇಟೆಯ ಬಾರಿನಲ್ಲಿ ಕುಳಿತು ಬೀರ ಕುಡಿಯುತ್ತ ಹರಟೆ ಹೊಡೆಯುತ್ತಿದ್ದರು.ಅನಂತ ಮತ್ತು ಅಸೀಫ ಗೆಳೆತನದ ವಾರಸಾ ಮುಂದುವರೆಸಿಕೊಂಡು ಹೋಗಲಿ ಎಂಬುದು ಅವರ ಮನದಿಂಗಿತ. ಪ್ರತಿ ರಾಖಿ ಹಬ್ಬಕ್ಕ ದಸ್ತಗೀರನ ಮಗಳು ಫಾತಿಮಾ ಅನಂತನಿಗೆ ರಾಖಿಕಟ್ಟಲಿಕ್ಕೆ ಬರತಿದ್ದಳು. ಆದರ ಈ ಫಾತಿಮಾನ ಗೆಳೆಯರ ನಡುವಿನ ಗೋಡೆ ಏಳಲಿಕ್ಕೆ  ಅಡಿಪಾಯ ಆಗಬಹುದು ಎಂದೂ ಯಾರು ಊಹಿಸಿರಲಾರರು.

ಪಿಯುಸಿ ಮುಗಿಸಿದ ಫಾತೀಮಾಗ ಮುಂದ ಟೀಚರ ಆಗುವ ಆಸೆ ಅದಕ್ಕೆ ಬೇಕಾದ ಮುಂದಿನ ಓದಿಗೆ ತಯಾರಿ ನಡಸಿದ್ದಳು.ಅಸೀಫಗ ಇದು ಸರಿ ಬರಲಿಲ್ಲ. ಏನು ಕಲತು ನವಕರಿ ಮಾಡುದು ಬೇಡ, ಮದುವೆಯಾಗು ಇದು ಅವನ ಹಟ. ಅವನಿಗೆ ಬೆಂಬಲವಾಗಿ ನಿಂತವಳು ಅವನ ತಾಯಿ.ಮಗ ಮತ್ತು ಹೆಂಡತಿಯ ಮಾತಿಗೆ ಕರಗಿದ ದಸ್ತಗೀರನೂ ಫಾತಿಮಾಳ ಕನಸಿಗೆ ಕಲ್ಲು ಹಾಕಿದ. ಇದನ್ನು ಬೇಡಿರದಿದ್ದ ಅವಳು ಕಂಗೆಟ್ಟಳು ಆಗ ನೆನಪಾದಾವ ಅವಳ ದತ್ತಣ್ಣಿ ಚಾಚಾ. ಅವ ತನ್ನ ಅಬ್ಬಾನಿಗೆ ತಿಳಿಸಿಹೇಳಬಹುದು ಅನ್ನುವ ಆಸೆಯಿಂದ ದತ್ತಣ್ಣಿ ಬಳಿ ಎಲ್ಲ ಹೇಳಿಕೊಂಡಳು. ಮಗಳ ಸಮಾನಳಾದವಳ ಕನಸಿಗೆ ಇಂಬುಕೊಡಲು ಅವ ನಿರ್ಧಾರ ಮಾಡಿದ ಗೆಳೆಯನ ಮನ ಒಲಿಸುವುದಾಗಿ ಹೇಳಿದ. ಅಂದಂತೆ ಅವ ಒಂದು ರವಿವಾರ ದಸ್ತಗೀರನ ಮನೆಗೆ ಹೋದ. ಅಲ್ಲಿ ಅಸೀಫ ಇದ್ದಿದ್ದು ಅನುಕೂಲಾತು ಯಾಕೆಂದರೆ ಫಾತಿಮಾಳ ಪ್ರಕಾರ ತನ್ನ ಅಣ್ಣನದೇ ಪ್ರಬಲ ವಿರೋಧವಿತ್ತು. ಅಸೀಫ ದತ್ತಣ್ಣಿಯ ಮಾತುಗಳನ್ನು ನಡುವೆಯೇ ತುಂಡರಿಸಿದ.ಇನ್ನೂ ಮೀಸೆ ಬಲಿತಿರದವ..ಚಿಕ್ಕವನಿದ್ದಾಗ ಚಾಚಾ ಎಂದು ತೊಡೆಮೇಲೆ ಆಡಿದವ, ಅವನ ಮಾತು ಖಾರವಾಗಿದ್ದವು.

"ಇದು ನಮ್ಮನಿ ವಿಚಾರ..ನಮ್ಮ ಮಂದಿ ಮುಂದ ನಾವು ಗೈರಾಗಲು ತಯಾರಿಲ್ಲ. ಇಷ್ಟಕ್ಕೂ ನೌಕರಿ ಮಾಡುವುದರಿಂದ ಏನಾಗತದ ಹೆಂಗಸೂರು ಏನಿದ್ದರೂ ಸಂಸಾರ ಮಾಡಾಕ ಮಾತ್ರ..ನಾವು ನೋಡಿದ ಹುಡುಗ ಛಲೋ ಅದಾನು ಅಕಿ ರಾಣಿ ಹಂಗ ಇರತಾಳ.." .

"ಆದರ ಅಕಿಗೆ ಕನಸವ ಅಲ್ಲೋ ಅಕಿ ಟೀಚರ ಆಗಬೇಕಂತಾಳ ಅಕಿ ಆಶಾಕ ಕಲ್ಲು ಹಾಕಬ್ಯಾಡರಿ..ದಸ್ತಗೀರ ನೀ ಅಕಿ ತಂದಿ ಇದ್ದೀ ನೀ ನಿರ್ಣಯ ಹೇಳು..'' ದತ್ತಣ್ಣಿ ಗೆಳೆಯ ಮಗ ಮಾತನಾಡಿದರೂ ಸುಮ್ಮನಿದ್ದುದು ನೋಡಿ ತಿವಿದ.

" ಅಕಿಗೆ ಸಲಿಗಿ ಕೊಟ್ಟು ತಪ್ಪಾಗೈತಿ..ಕಾಫಿರ ಮನಿಗೆ ಹೋಗಿ ಛಾಡಾ ಹೇಳ್ಯಾಳ.." ಅಸೀಫ ಎಲ್ಲರೂ ನೋಡುತ್ತಿದ್ದಂತೆಯೇ ಫಾತಿಮಾಳ ಕೆನ್ನೆಗೆ ಹೊಡೆದ. ದತ್ತಣ್ಣಿಗೆ ಬಹಳ ಕೆಟ್ಟನಿಸಿತು.. ನನ್ನ ಸಲುವಾಗಿ ಅಕಿ ಹೊಡತಾ ತಿನಬೇಕಾತಲ್ಲ ಅಂತ ಅವನಿಗೆ ಸಂಕಟ ಆದರ ಅಕಿ ಅಪ್ಪ ಕಲ್ಲ ಕೂತಂಗ ಸುಮ್ಮನಿದ್ದ. ಇನ್ನು ಅಲ್ಲಿ ಕೂತು ಏನೂ ಉಪಯೋಗವಿಲ್ಲ ಅಂತ ಅನ್ನಿಸಿ ದತ್ತಣ್ಣಿ ಎದ್ದ. ಒಳಗಿನಿಂದ ಫಾತಿಮಾಳ ಅಳುವಿನ ದನಿ ಕೇಳುತ್ತಿತ್ತು.

ಈ ಪ್ರಕರಣ ಗೆಳೆಯರ ನಡುವೆ ಬಿರುಕು ಬಿಡಲು ಬುನಾದಿಯಾಯಿತು. ದತ್ತಣ್ಣಿ ತನ್ನ ಹೆಂಡತಿ ಮುಂದೆ ಎಲ್ಲ ಹೇಳಿಕೊಂಡಿದ್ದ.ಅದು ಅನಂತನ ವರೆಗೂ ತಲುಪಿತ್ತು. ಮಗನಿಂದಲೂ ಸಿಕ್ಕಿದ್ದು ಭತ್ರ್ಸನೆಯೇ. ಹಂಗ ನೋಡಿದರ ಮಗನಿಂದ ಬೇರೆನೂ ಅಪೇಕ್ಷೆ ಇರಲಿಲ್ಲ. ಅವನಿಗೆ ಅಪ್ಪನ ಗೆಳೆತನ ಮುಂದುವರೆಸುವುದು ಬೇಕಾಗಿರಲಿಲ್ಲ ಆ ಮಂದಿ ದಗಾಕೋರರು, ನಂಬಿಕೆ ಅವರ ಮೇಲೆ ಇಡುವುದು ಮೂರ್ಖತನ ಇದು ಅವನ ವಾದ. ಅನಂತ  ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವ. ಹಂಗ ನೋಡಿದರ ಕಿಲ್ಲೆಕ್ಕೂ ಸಂಘಟನೆಗೂ ಹಳೆಯ ನಂಟು. ದತ್ತಣ್ಣಿ ಸಣ್ಣವನಿದ್ದಾಗ ಮರಾಠಿಸಾಲೆಯ ಬಯಲಿನಲ್ಲಿ ಭಗವಾ ಝಂಡ ಹಾರಿಸುತ್ತ ಕವಾಯತು ಮಾಡುತ್ತಿದ್ದರು. ದತ್ತಣ್ಣಿಯ ವಾರಿಗೆಯ ಅನೇಕ ಗೆಳೆಯರು ಅಲ್ಲಿ ಹೋಗುತ್ತಿದ್ದರು ಒಂದೆರಡು ಸಲ ದತ್ತಣ್ಣಿನೂ ಹೋಗಿದ್ದ. ತನಗಿಂತಲೂ ಉದ್ದವಾದ ಲಾಠಿ ತಿರುವುದು ತ್ರಾಸಾಗಿ ಬಿಟ್ಟಿದ್ದ. ಅನಂತ ಪೂರ್ಣಪ್ರಮಾಣದಲ್ಲಿ ಆ ಸಂಘಟನೆಯಲ್ಲಿ ಇನ್ವಾಲ್ವ ಆಗಿದ್ದ.ಅವನ ಗೆಳೆಯಂದಿರು ಆಗೀಗ ಮನೆಗೂ ಬರತಿದ್ದರು. ಹಲವು ಸಲ ಅವರಾಡುವ ಮಾತು ದತ್ತಣ್ಣಿಯ ಕಿವಿಗೂ ಬೀಳುತ್ತಿದ್ದವು. ಆ ಮಾತುಗಳಲ್ಲಿ ಹೆಚ್ಚಾಗಿ ಇರುತ್ತಿದ್ದುದು ಮುಸಲ್ಮಾನರ ಮೇಲಿನ ಕಿಡಿ. ಆವೇಶ ಭರಿತರಾಗಿ ಅವರು ಮಾತಾಡುತ್ತಿದ್ದರು. ಮಗ ಇಂತಹ ತೀವ್ರ ಮಂದಿಯ ಗೆಳೆತನ ಬೆಳೆಸಿದ್ದು ಸರಿ ಬಂದಿರಲಿಲ್ಲ. ಅವನಿಗೆ ತಿಳಿಹೇಳಲು ಪ್ರಯತ್ನಿಸಿ ಸೋತಿದ್ದ. ಅಂತೆಯೇ ಮಗನಿಂದ ಅವನಿಗೆ ಉಪದೇಶವೂ ಸಿಗುತ್ತಿತ್ತು. ಯಾವುದೋ ಪುಸ್ತಕದ ವಸ್ತು ಬಾಯಿಪಾಠ ಮಾಡಿ ಒಪ್ಪಿಸುವವರಂತೆ ಇರುತ್ತಿತ್ತು. ದತ್ತಣ್ಣಿಗೆ ಅಂತಹ ಪುಸ್ತಕಗಳು ಅದರಲ್ಲಿನ ಉಪದೇಶಗಳು ಹೊಸದಲ್ಲ. ಅವ ಯುವಕನಾಗಿದ್ದಾಗ ಯಾರೋ ಒಂದು ಪುಸ್ತಕ ಕೊಟ್ಟು ಓದಿ ಜಾಗೃತರಾಗಲು ಹೇಳಿದ್ದರು. ಒಂದೆರಡು ಪುಟ ಓದುವುದರಲ್ಲಿ ಅದರಲ್ಲಿ ಅಡಕವಾಗಿರೋದು ದ್ವೇಶಬೋಧೆ ಮಾತ್ರ ಅಂತ ಅವನಿಗೆ ಮನದಟ್ಟಾಗಿತ್ತು. ಓದುವುದು ನಿಲ್ಲಿಸಿದ್ದ. ಮಗನಿಗೆ ತಿದ್ದುವ ಅವನ ಪ್ರಯತ್ನ ಹುಸಿಹೋಗುತ್ತಿತ್ತು. ಫಾತೀಮಾಳ ಪ್ರಕರಣದಲ್ಲಿ ಅಪ್ಪ ವಹಿಸಿದ ಹಿತಾಸಕ್ತಿ ಅದಕ್ಕೆ ಸಿಕ್ಕಿದ ಪ್ರತಿಫಲ ಎರಡೂ ಅನಂತ ಮೊದಲೇ ಊಹಿಸಿದ್ದನಂತೆ.

"ಅವರು ಒಂದು ನಮೂನಿ ಕೆಸರು ಅವರಿಗೆ ಕಲ್ಲು ಒಗದರ ತಾಕುವುದು ನಮಗ.." ಎಂಬ ಅನಂತನ ಟೀಕೆಯ ಮಾತು ಅನಂತನಿಗೆ ನೋವು ತಂದಿತ್ತು. ಆದರೆ ಅದಕ್ಕೂ ದಿಗಿಲಾದದ್ದು ಗೆಳೆಯ ದಸ್ತಗೀರನಲ್ಲಾದ ಬದಲಾವಣೆ.

ಹಂಗ ನೋಡಿದರ ದಸ್ತಗೀರ ಎಂದೂ ನಮಾಜು ತಪ್ಪಿಸಿದವನಲ್ಲ. ಓಣಿಯ ಮಸೀದಿಯ ಮೀಟಿಂಗುಗಳಲ್ಲಿ ಭಾಗಿಯಾಗುತ್ತಿದ್ದ. ಆದರೂ ಒಂದು ಸುರಕ್ಷಿತ ಅಂತರ ಅವ ಕಾಯ್ದುಕೊಂಡು ಬಂದಿದ್ದ. ಅವನ ಜಮಾತಿನ ಅನೇಕ ಹಿರಿಯರು ಅವನನ್ನು ಬದಲಾಯಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಫಾತೀಮಾಳ ಪ್ರಕರಣ ಎಲ್ಲದಕೂ ನಾಂದಿ ಆಯಿತು ಎಂಬಂತೆ ದಸ್ತಗೀರ ಬದಲಾದ. ದಪ್ಪನಾಗಿ ಮೀಸೆ ಬಿಟ್ಟವ ಅದನ್ನು ತೆಗೆಸಿದ ದಾಡಿ ಬೆಳೆಸಿಕೊಂಡ . ಕೆಲಸ ಮಾಡುವಾಗ ಮಾತ್ರ ಪ್ಯಾಂಟು ಶರ್ಟು, ಉಳಿದಂತೆ ಸಡಿಲವಾದ ಪೈಜಾಮ ಅದರ ಕಾಲುಗಳು ಗಿಡ್ಡವು, ತಲೆಯಮೇಲೊಂದು ಟೋಪಿ ಹಿಗೆ ಅವನ ವೇಶಭೂಶ ಬದಲಾತು. ಕೆಲವರು ಹೇಳುವಹಾಗೆ ಫಾತೀಮಾಳನ್ನು ಮದುವೆ ಮಾಡಿಕೊಟ್ಟ ಮನೆತನ ತೀರ ಸಂಪ್ರದಾಯ ಪಾಲಿಸುವವರು ಅವರನ್ನು ಮೆಚ್ಚಿಸಲು ಅವ ಹೀಗೆ ಬದಲಾಗಿದ್ದಾನೆ ಅಂತ. ದತ್ತಣ್ಣಿಗೂ ಗೆಳೆಯನ ಈ ಬದಲಾದ ವರಸೆ ವಿಚಿತ್ರ ಅನ್ನಿಸಿತ್ತು.
ಈಗೀಗ ದಸ್ತಗೀರ ಸಿಗುವುದೇ ಅಪರೂಪ ಆಗಿತ್ತು. ಮೊದಲಿನ ಹಾಗೆ ಅವ ಮನೆಗೆ ಬರುತ್ತಿಲ್ಲ ಎಂಬ ಸಂಗತಿ ಮನದಟ್ಟಾಗಿತ್ತು. ಪ್ರತಿತಿಂಗಳೂ ಸೇರುವ ಬಾರಿಗೂ ಅವ ಬರುತ್ತಿರಲಿಲ್ಲ ಈಗೀಗ .ಫೋನಿನಲ್ಲೂ ಈಗ ಅವ ಸಲಿಗೆಯಿಂದ ಮಾತನಾಡುವುದಿಲ್ಲ . ವಿಚಿತ್ರ ಅಂದರೆ "ಬಾರಲೇ ಹೋಗಲೇ.." ಅನ್ನುವ ಬದಲು " ಸಲಾಂ ಆಲೈಕುಂ ಖೈರಿಯತ್.." ಅಂತೆಲ್ಲ ದಸ್ತಗೀರ ಮಾತನಾಡಲು ಸುರುವಿಟ್ಟಿದ್ದ. ದತ್ತಣ್ಣಿ ಮತ್ತು ದಸ್ತಗೀರರ ನಡುವೆ ಅಂತರ ಹೆಚ್ಚಿದಂತೆಲ್ಲ ಖುಶಿಪಟ್ಟವ ಅಂದರೆ ಅನಂತ. ಅಪ್ಪನಿಗೆ ಹೇಳಿ ಹೇಳಿ ಆಗದಿದ್ದುದು ತಾನಾಗಿಯೇ ಆಗುತ್ತಿರುವುದಕ್ಕೆ ಅವನಿಗೆ ಸಂತೋಶವಿತ್ತು.

ಸಂಪರ್ಕ ಕಮಿಯಾಗಿ ಕೊನೆಗೆ ಕಡಿದು ಹೋಗುವ ಸ್ಥಿತಿ. ಆಗೊಮ್ಮೆ ಈಗೊಮ್ಮೆ ದಸ್ತಗೀರ ಸಿಕ್ಕರೂ ಮುಗಮ್ ಆಗಿ ಮಾತಾಡುತ್ತಿದ್ದ.ಮೊದಲಿನ ನಗೆ ಚಾಷ್ಟಿ ಎಲ್ಲಾ ಹೋಗಿ ಮಾತು ಬರೀ ನೀರಸ ಆಗಿತ್ತು. ದತ್ತಣ್ಣಿ ಬರುವ ದೀಪಾವಳಿಗೆ ಫರಾಳಕ್ಕೇನೋ ಆಮಂತ್ರಿಸಿದ ಆದರೆ ಗೆಳೆಯ ಬರುವ ಬಗ್ಗೆ ಅವನಿಗೆ ಖಾತ್ರಿಇರಲಿಲ್ಲ. ದೀಪಾವಳಿಯ ಫರಾಳ ಗೆಳೆಯ ಬರದೇ ಕರಗಿ ಹೋಗಿತ್ತು..ಮುಂದ ಎಂಟುದಿನಕ್ಕ ಈದ್ ಹಬ್ಬ. ಗೆಳೆಯ ಕರೆಯದಿದ್ದರೂ ದತ್ತಣ್ಣಿ ಹೋಗಿದ್ದ. ದಸ್ತಗೀರ ಮನೆಯಲ್ಲಿರಲಿಲ್ಲ..ಬುರಖಾ ಹಾಕಿಕೊಂಡ ಅವನ ಹೆಂಡತಿ ಪಡದೆಯ ಹಿಂದಿನಿಂದಲೇ ಹೇಳಿದಳು..ಮೊದಲಿನ ಹಾಗೆ ಮಾತುಕತೆ ಇಲ್ಲ. ದತ್ತಣ್ಣಿಗೆ ಇರಿಸುಮುರಿಸಾಗಿ ಹೊರಟ. ದಾರಿಯ ತಿರುವಲ್ಲಿ ದಸ್ತಗೀರ ಭೇಟಿಯಾದ.

ಇವನ ಹಬ್ಬದ ಅಭಿನಂದನೆಗು ಅವನ ಅನ್ಯಮನಸ್ಸಿನ ಉತ್ತರ.,ಮಗ ಕೆಲಸಕ್ಕೆ ಹತ್ತಿದ್ದು, ಮುಂಬಯಿಯಲ್ಲಿ ಕೆಲಸ ಸಿಕ್ಕಿರುವುದಾಗಿ ಹೇಳಿದ. ಪ್ರಶ್ನೆಗೆ ಒಂದೋ ಎರಡೋ ಶಬ್ದದಲ್ಲಿ ಮಾತ್ರ ಉತ್ತರ ಕೊಡುವ ಗೆಳೆಯ ಅಪರಿಚಿತನಂತೆ ಕಂಡ. ಸಣ್ಣವರಿದ್ದಾಗ ಕೆಲವು ಸಲ ಒಂದೇ ಡಬ್ಬಿ ಹಂಚಿಕೊಂಡು ತಿಂದವರು..ಇಂದು ಅಪರಿಚಿತರಂತೆ ವರ್ತಿಸಬೇಕಾಗಿ ಬಂದುದು
ಸಹಜವಾಗಿಯೇ ದತ್ತಣ್ಣಿಗೆ ನೋವು ತಂದಿತ್ತು. ಅದೂ ದಸ್ತಗೀರ ಹೆದರಿ ಹೆದರಿ ಮಾತನಾಡುತ್ತಿದ್ದ. ಗಳಿಗೆಗೊಮ್ಮೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂಬ ಆತಂಕದಿಂದ ಅಲ್ಲಿ ಇಲ್ಲಿ ನೋಡುತ್ತಿದ್ದ. ಗೆಳೆಯನ ಈ ವರ್ತನೆ ಸರಿಬರಲಿಲ್ಲ ದತ್ತಣ್ಣಿಗೆ,ಕೇಳಿಯೂ ಬಿಟ್ಟ. ಉತ್ತರ ಅನಿರೀಕ್ಷಿತ ವಾಗಿತ್ತು. ತಮ್ಮಿಬ್ಬರ ಗೆಳೆತನ ಜಮಾತ್ ಮಂದಿಗೆ ಸರಿ ಬರೋದಿಲ್ಲ..ಓಣಿಯಲ್ಲಿ ಮಾತು ಕೇಳಬೇಕಾಗುತ್ತದೆ ಮುಖ್ಯವಾಗಿ ಫಾತೀಮಾಳ ಮನೆಯವರಿಗೆ ಈ ಸಂಗತಿ ಗೊತ್ತಾದರೆ ತೊಂದರೆ ..ಇತ್ಯಾದಿ ದಸ್ತಗೀರ ಹೇಳಿದ ಇವನ ಉತ್ತರಕ್ಕೂ ಕಾಯದೇ "ಅಲ್ಲಾಹ ಹಾಫೀಜ" ಅಂತ ಹೇಳಿ ಹೊರಟುಹೋದ. ದತ್ತಣ್ಣಿಗೆ ಅವನ ಮಾತು ಪೂರ್ತಿ ಒಳಗಿಳಿಯಲಿಲ್ಲ. ಮೂಲೆಯ ಹೊಟೆಲನಲ್ಲಿ ಕುಳಿತು ಚಹಾ ಕುಡಿಯುತ್ತ ಕೂತವಗ ಈ ಹಿಂದೆ ಕಿಲ್ಲೆದಲ್ಲಿ ಮನೆವರೆಗೂ ಬಂದು ಒಂದು ರೀತಿ ಧಮಕಿ ಕೊಟ್ಟುಹೋದ ಪಾಠಕನ ಮಾತು ನೆನಪಿಗೆ ಬಂದವು.. "ದತ್ತಣ್ಣಿ ಹಿಂದಿನ ಹಂಗ ಆ ಮಂದಿ ಈಗಿಲ್ಲ ಬಹಳ ಹೆಚಿಗೊಂಡಾರ ಅವರ ಜೋಡಿ ಸಲಿಗಿ ಕಮಿ ಮಾಡರಿ ಇದು ನಿಮಗೂ ನಿಮ್ಮ ಕುಟುಂಬಕ್ಕೂ ಛಲೋ.." ಅವನ ಮಾತಿಗೆ ಲಕ್ಷಕೊಡದೆ ಮುಂದುವರೆದಿದ್ದೆ. ಗೆಳೆತನದಾಗ ಈ ಜಾತಿ ಧರ್ಮ ಬರಬಾರದು ಅಂತ ನಿಲುವು ತಳೆದಿದ್ದ. ಈಗ ದಸ್ತಗೀರನೂ ಇಂತಹುದೇ ಸುಳಿಯಲ್ಲಿ ಸಿಕ್ಕಾನ ಅವ ಅದರಿಂದ ಹೊರಗ ಬರಲಿ ಅಂತ ಆಶಿಸಿದ ದತ್ತಣ್ಣಿ.

ಅಸೀಫ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದವ ಎಂಟು ತಿಂಗಳ ನಂತರ ವಾಪಸ ಬಂದಿದ್ದ. ಮಗನ ಪಗಾರ ಛಲೋ ಇತ್ತು. ಆದರ ಕೆಲಸ ಬಿಟ್ಟು ಬಂದಿರುವುದಾಗಿ ಅವ ಹೇಳಿದಾಗ ದಸ್ತಗೀರನಿಗೆ ದಿಗಿಲು. ಅವನಿಗೊಂದು ಮದುವೆ ಮಾಡುವ ಮಾತು ಆಡಿದ. ಆರು ತೀಂಗಳ ನಂತರ ಅಂದ ಮಗ ಪರಕೀಯನಂತೆ Pಕಂಡ. ಫಾತೀಮಾ ಈಗ ಎರಡು ಮಕ್ಕಳ ತಾಯಿ. ಮೊದಲಿನ ಹಾಗೆ ಅಸೀಫ ಇಲ್ಲ. ಈಗ ಜೀನ್ಸ ಪ್ಯಾಂಟಹಾಕುತ್ತಾನೆ ಹಾಗೆಯೇ ತಲೆಮೇಲೆ ಟೋಪಿಯು ಇಲ್ಲ ಆದರೂ ಮಸೀದೆಗೆ ಹೋಗಿ ನಮಾಜು ಮಾಡುವುದು ಬಿಟ್ಟಿರಲಿಲ್ಲ. ಅಂತೆಯೇ ಅವನ ಗೆಳೆಯರ ಗುಂಪು ಅವಾಗಿವಾಗ ಊರುರು ಸುತ್ತುತ್ತಿದ್ದರು. ಕೆಲವೊಮ್ಮೆ ಮನೆಯ ಅಟ್ಟದ ಮೇಲೆ ಮೀಟಿಂಗ ಮಾಡುತ್ತಿದ್ದರು ಹಾಗೆಯೇ ಆಸೀಫನ ಬಳಿ ಈಗ ಲ್ಯಾಪಟಾಪ ಬಂದಿತ್ತು. ದಸ್ತಗೀರನಿಗೆ ಮಗನ ಚಲನವಲನ ನಡವಳಿಕೆ ಗೆಳೆಯರ ಜೊತೆಗಿನ ಗುಸುಗುಸು ಮಾತು ಸರಿಬರುತ್ತಿರಲಿಲ್ಲ. ಒಂದೆರಡು ಸಲ ಆ ವಿಷಯವಾಗಿ ವಾದವಿವಾದವೂ ಆಗಿದ್ದವು. ದಸ್ತಗೀರ ಆತಂಕ ಪಡಲು ಕಾರಣ ಇರದೇ ಇರಲಿಲ್ಲ. ಬೆಂಗಳೂರಿನಲ್ಲಿದ್ದು  ಈಗ ನಿವೃತ್ತಿಯ ನಂತರ ಓಣಿಯಲ್ಲಿ ತಮ್ಮ ಹಳೆಯ ಮನೆ ನವೀಕರಿಸಿ ವಾಸವಾಗಿರುವ ಖಾನಸಾಹೇಬರು ಹುಡುಗರ ಗುರು ಆಗಿದ್ದರು. ಅವರ ತೋಟದಲ್ಲಿ ಹುಡುಗರು ಸೇರುತ್ತಾರೆ ಅದಾರೋ ಕಾಸಿಂ ಎಂಬುವ ಮನುಷ್ಯ ಆಗಾಗ ಬಂದು ಹೋಗುತ್ತಾನೆ ಏನೇನೋ ಹೇಳುತ್ತಾನೆ ಹುಡುಗರಿಗೆ ಉಪದೇಶ ಮಾಡುತ್ತಾನೆ ಅಂತೆಲ್ಲ ಸುದ್ದಿ ಇದ್ದವು.ಈ ವಿಷಯ ದಸ್ತಗೀರಗೂ ಗೊತ್ತಿತ್ತು. ಮಗನೊಡನೆ ಕೇಳಿದಾಗ ನೇರ ಉvತ್ತರ ದೊರೆತಿರಲಿಲ್ಲ.ಖಾನಸಾಹೇಬರ ಸಹವಾಸವೇ ಮುಂದಿನ ಎಲ್ಲ ಅನಾಹುತಗಳಿಗೆ ನಾಂದಿಯಾಗಬಲ್ಲದು ಆಂತ ದಸ್ತಗೀರನಿಗೆ ಅಂದಾಜು ಬರಲಿಲ್ಲ.

ದಸ್ತಗೀರ ಒಂದು ಕಂಪ್ಯೂಟರ ರಿಪೇರಿ ಅಂಗಡಿ ತೆರೆಯಲು ಹಣ ಕೇಳಿದಾಗ ಖಾನಸಾಹೇಬರೆ ಕೊಟ್ಟಿದ್ದರು. ಮೇಲಾಗಿ ಅಸೀಫನ ಮೇಲೆ ಅವರಿಗೆ ವಿಶೇಷ ಮಮತೆ..ಅವರ ಜೊತೆ ಮುಖತಃ ಅಲ್ಲದೇ ಫೋನಿನಲ್ಲೂ ಆಗಾಗ ಅಸೀಫ ಮಾತಾಡುತ್ತಿದ್ದ. ಅಸೀಫನ ಗೆಳೆಯನ ತಂದೆ ಗುಡುಸಾಬ ಒಮ್ಮೆ ಸಿಕ್ಕಾಗ ಅಸೀಫನ  ಮೇಲೆ ನಿಗಾ ಇಡುವಂತೆ ಹೇಳಿದ್ದ.ಅವ ಯಾಕೆ ಹೀಗೆ ಹೇಳಿರಬಹುದು ಈ ವಿಶಯ ಕೊರೆಯುತ್ತಿತ್ತು. ಅಸೀಫ ಪ್ರಶ್ನೆ ಕೇಳಿದರೆ ಸಿಡಿಮಿಡಿ ಮಾಡುತ್ತಿದ್ದ. ಮನೆಯಲ್ಲಿ ಅಶಾಂತಿಯ ವಾತಾವರಣ ದಸ್ತಗೀರಗೂ ಬೇಡ ಅನಿಸಿತ್ತು ಹೀಗಾಗಿ ಕೆದಕಿ ಕೇಳಲು ಅವನಿಗೆ ಹಿಂಜರಿತವಿತ್ತು. ಗುಡುಸಾಬನ ಮಾತು ಖರೆ ಆಗುವ ದಿನ ಬಂತು..ಒಂದು ರಾತ್ರಿ ಖಾನಸಾಹೇಬರು ಬಂದವರು ಅಸೀಫನನ್ನು ಉಟ್ಟ ಬಟ್ಟೆಯ ಮೇಲೆ ಕರಕೊಂಡು ಹೋಗಿದ್ದರು. ಎಲ್ಲಿ ಯಾಕೆ ಎಂಬ ಪ್ರಶ್ನೆಗಳು ದಸ್ತಗೀರನ ಗಂಟಲಲ್ಲಿಯೇ ಉಳಿದುಹೋದವು. ಮುಂದೆ ಆದ ವಿದ್ಯಮಾನಗಳು ಇಡೀ ರಾಜ್ಯ ವನ್ನೇ ತಲ್ಲಣಗೊಳಿಸಿದ್ದವು. ಅಹ್ಮದಾಬಾದಿನಲ್ಲಿ ವಿಧ್ವಂಸಕ ಕಾರ್ಯ ಹಮ್ಮಿಕೊಂಡ ಮುಸ್ಲಿಂ ಯುವಕರ ಗುಂಪೊಂದು ಸೆರೆಯಾಗಿತ್ತು. ಆ ಗುಂಪಿನ ಮುಖಂಡನೇ ಕಾಸಿಂ. ವಿಚಾರಣೆ ವೇಳೆ ಅವ ತನ್ನ ಹುಬ್ಬಳ್ಳಿಯ ವಾಸದ ಬಗ್ಗೆನೂ ಬಾಯಿಬಿಟ್ಟಿದ್ದ. ಅಲ್ಲಿ ಒಂದು ಸ್ಲೀಪರ ಸೆಲ್ ತಯಾರುಮಾಡಿರುವ ಸಂಗತಿ ಅಸೀಫ ಹಾಗೂ ಖಾನಸಾಹೇಬರ ಬಗ್ಗೆಯೂ ಬಾಯಿಬಿಟ್ಟಿದ್ದ. ಗುಡುಸಾಬನಿಗೆ ಅವನ ಮಗ ಹೆದರುತ್ತಲೇ ಖಾನ ಸಾಹೇಬರ ಮನೆಯಲ್ಲಿ ನಡೆಯುತ್ತಿದ್ದ ಮೀಟಿಂಗುಗಳ ಸತ್ಯ ಬಯಲುಮಾಡಿದ್ದ. ಸುದ್ದಿ ಕೇಳಿದ ದಸ್ತಗೀರ ಕುಸಿದು ಹೋದ. ಹೆಂಡತಿಯೂ ಕಂಗಾಲಾಗಿದ್ದಳು. ವಿಚಿತ್ರ ಅಂದರೆ ಖಾನಸಹೆಬರು ಊರುಬಿಟ್ಟು ಹೋಗಿದ್ದರು. ಅಂದೇ ಅಪರಾತ್ರಿ ಒಂದು ಜೀಪಿನಲ್ಲಿ ಬಂದ ಬೂಟುಗಾಲಿನ ಜನ ಮನೆಗೆ ನುಗ್ಗಿ ಅಸೀಫನ ರೂಮು ತಡಕಾಡಿದ್ದರು. ಅಸೀಫನನ್ನು ಕರಕೊಂಡು ಹೋಗಿದ್ದರು ಅಂತೆಯೇ ಅವನ ಮೊಬೈಲು, ಲ್ಯಾಪಟಾಪು ಕೆಲವು ಕಾಗದಪತ್ರ ಎಲ್ಲ ತೆಗೆದುಕೊಂಡು ಹೋಗಿದ್ದರು. ಇದ್ದಬಿದ್ದ ಧೈರ್ಯಒಟ್ಟುಮಾಡಿಕೊಂಡು ಕೇಳಿದ. ಇವನ ಪ್ರಶ್ನೆಗೆ ಉತ್ತರ ಕೊಡದೆ ಕೆಕ್ಕರಿಸಿ ನೋಡಿದರು.

ಓಣಿಯ ಜನ ಜಮಾಯಿಸಿದ್ದರು ಮರುದಿನ ಅವನ ಮನೆ ಮುಂದೆ. ಹಾಗೆಯೇ ಟಿವಿ ಚಾನಲ್‍ನವರ ವ್ಯಾನುಗಳು ಆ ಕಿರಿದಾದ ಓಣಿಯಲ್ಲಿ ತುಂಬಿಕೊಂಡವು. ರಿಪೋರ್ಟರುಗಳು ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು. ಉತ್ತರ ಕೊಡಲಾರದೆ ದಸ್ತಗೀರ ಕಂಗಾಲಾಗಿದ್ದ. ಅವನ ಅಳಲು ಕೇಳುವ ಗರಜು ಅವರಿಗಿರಲಿಲ್ಲ. ಹೆಚ್ಚಿನ ಚಾನೆಲನವರು ತಮ್ಮ ವಿಶೇಷ ಟಿ ಪ್ಪಣಿಗಳ ಜೊತೆಗೆ ಸುದ್ದಿ ಬಿತ್ತರಿಸುತ್ತಿದ್ದರು.ಅವರ ಮಾತಿನಲ್ಲಿ ಹೇಗೆ ಅಮಾಯಕ ಮುಸ್ಲಿಂಯುವಕರು ಸುಲಭವಾಗಿ ದಾಳಗಳಾಗುತ್ತಿದ್ದಾರೆ ಅಪ್ಪ ಅಮ್ಮ ಅಮಾಯಕರಗಳಾಗಿ ನಟಿಸುತ್ತಾರೆ ಇತ್ಯಾದಿ ತಮಗೆ ತಿಳಿದಂತೆ ವರದಿ ಮಾಡುತ್ತಿದ್ದರು. ಗುಡೂಸಾಬನೂ ಟಿವಿ ಕೆಮರಾಗಳ ಮುಂದೆ ಹೇಳುತ್ತಿದ್ದ ಹೇಗೆ ತಾನು ದಸ್ತಗೀರನಿಗೆ ವಾರ್ನಮಾಡಿದ್ದು ಅವ ಕೇಳದೇ ಹೋದದ್ದು ಇತ್ಯಾದಿ ಹೇಳುತ್ತಿದ್ದ. ಆಘಾತಕ್ಕಿ ಒಳಗಾದ ದಸ್ತಗೀರ ಬಾಗಿಲು ಬಂದು ಮಾಡಿ ರೂಮುಸೇರಿದವ ಬಿಕ್ಕಿಬಿಕ್ಕಿ ಆಳಲು ಸುರುವಿಟ್ಟ. ಯಾಕೋ ಅವನಿಗೆ ದತ್ತಣ್ಣಿ ನೆನಪಾದ..ತನ್ನ ಅಳಲನ್ನು ಕೇಳಿಸಿಕೊಳ್ಳುವವ ಅವನೊಬ್ಬನೇ ಮಾತ್ರ ಈ ಭಾವನೆ ಬಲವಾಯಿತು. ಆದರೆ ದತ್ತಣ್ಣಿ ನಂಬುತ್ತಾನೆಯೇ ಮಗನ ಕಾರಭಾರ ತನಗೇನೂ ಗೊತ್ತಿಲ್ಲ ಎಂಬ ಸತ್ಯ ಅವನಾದರೂ  ತ್ತಾನೆಯೇ..ಮುಖ್ಯವಾಗಿ ಪಾಲನೆಯಲ್ಲಿ ಯಾವ ಕೊರತೆ ಕಂಡಿತು ಅಸೀಫ ಹೀಗೆಕೆ ಬದಲಾದ. ಹೆತ್ತವರ ಸಂಕಟ ಯಾಕೆ ಹೀಗೆ ಮಕ್ಕಳಿಗೆ ಅರ್ಥ ಆಗುವುದಿಲ್ಲ. ಅವನಲ್ಲಿ ಪ್ರಶ್ನೆಗಳಿದ್ದವು. ಅವನಿಗೆ ಗೊತ್ತು ದತ್ತಣ್ಣಿಯ ಬಳಿಯೂ ಉತ್ತರ ಇರುವುದಿಲ್ಲ ಆದರೆ ತನ್ನ ಅಳಲು ಕೇಳಲು ಅವ ಕಿವಿಯಾದನು ಎಂಬ ನಿರೀಕ್ಷೆ ಅವನಲ್ಲಿ ಅವನ ಹೆಗಲ ಮೇಲೆ ತಲೆಇಟ್ಟು ಅಳಬಹುದು ಮನಸ್ಸು ಹಗುರುಮಾಡಿಕೊಳ್ಳಬಹುದು..ನಿರೀಕ್ಷೆ ಹೊಸ ಬೆಳಕು ಮೂಡಿಸಿತು. ನಮ್ಮ ನಡುವೆ ಗೋಡೆಗಳನ್ನು ಬೆಳೆಯಲು ಬಿಟ್ಟು ತಪ್ಪುಮಾಡಿಯಾಗಿದೆ..ಈಗ ಗೋಡೆ ಒಡೆದು ಕೈ ಚಾಚಬೇಕು ಮತ್ತು ತಾನು ಚಾಚಿದ ಕ್ಯೆ ಹಿಡಿಯಲು  ದತ್ತಣ್ಣಿನೂ ಮುಂದೆ ಬರಬಹುದೇನೋ...ಈ ಯೋಚನೆಯಿಂದ ದಸ್ತಗೀರ ನಿರಾಳವಾದ. ಅಂತೆಯೇ  ಬಂದ ದತ್ತಣ್ಣಿಯ ಫೋನು ಅವನ ಆಸೆಗೆ ಇಂಬು ನೀಡಿತ್ತು. ಬರಲಿರುವ ಗೆಳೆಯನ ದಾರಿ ಕಾಯುತ್ತ ಅವ ಕುಳಿತ.

ಬುಧವಾರ, ಫೆಬ್ರವರಿ 29, 2012

ಕತ್ತಿ ಕತೆ..

ಅವರ ಕೈಯ್ಯಲ್ಲಿನ ಕತ್ತಿ ಮಿನುಗಿತ್ತು..
ತುದಿಗೆ ಕೇಕಿನ ಬೆಣ್ಣೆ ಮೆತ್ತಿತ್ತು..
ಹಿಂದಿರುವ ನೊಣ , ಕಾವಿ ಧರಿಸಿತ್ತು
ಗುಂಯ್ಗುಡುತ್ತಿತ್ತು...
ವಂಧಿಮಾಗಧರ ಬೋ ಪರಾಕು
ನಿಕಟಪೂರ್ವ ದೊರೆಯ ಮುಖದತುಂಬ
ಕವಿದ ಕಾರ್ಮೋಡ..
ಜಾತಿ ಒಂದೇ ವಲಂ ಎಂದು ಬಡಬಡಿಸಿದವನ
ಮುಖ ಸಪ್ಪೆ.. ಅಂತೆಯೇ ಆ ಕತ್ತಿ ನಾಲಿಗೆಗೆ
ಇಳಿದಿತ್ತು..
ಅವರೇನೋ ಕುರುಡರು ..ಚೂರಿ ಅಲಗನ್ನು
ಗುರುತಿಸಲಿಲ್ಲ... ನಾವು ನೀವು
ಕಣ್ಣಿದ್ದವರು..ಅದೆಷ್ಟೋ ಚೂರಿಗಳು ನಮ್ಮೆದೆ
ಎದೆಬಗೆದು ನೆತ್ತರ ಉಂಡರೂ ಮುಖದಿಂದಿನ್ನೂ
ಚೀತ್ಕಾರ ಬಂದಿಲ್ಲ..
ಈ ಕಾವಿ, ಖಾದಿಯ ನಡುವೆ ನಮ್ಮ ಬದುಕು
ಬರಡಾಯಿತಲ್ಲ....!!

ಶನಿವಾರ, ಫೆಬ್ರವರಿ 25, 2012

ಮಠಗಳು ಈಗ ಮಾನ್ಯವೇ

ಮೊನ್ನೆ ಸುವರ್ಣಚಾನೆಲ್ ನಲ್ಲಿ ಚರ್ಚೆ ಇತ್ತು. ನಮ್ಮ ಕರ್ನಾಟಕವನ್ನು ಸಧ್ಯ ಬಾಧಿಸುತ್ತಿರುವ
ರಾಜಕೀಯ ಅಸ್ಥಿರತೆ ಬಗ್ಗೆ. ಅಲ್ಲಿ ಕರ್ನಾಟಕ ರಾಜ್ಯದ ಪಂಚಮಸಾಲಿಸಭಾದ ಅಧ್ಯಕ್ಷರೂ
ಹಾಜರಿದ್ದರು. ಚರ್ಚಿಸುತ್ತ ಅವರಂದ ಮಾತು ಅದರ ಸಾರಾಂಶ ವಿಷ್ಟೇ ನಮ್ಮ ರಾಜ್ಯದಲ್ಲಿ
ವೀರಶೈವರದು ಪ್ರಾಬಲ್ಯ ಜನಸಂಖ್ಯೆಯಲ್ಲಿ ಹೀಗಿದ್ದು ಆ ಪಂಗಡದ ಯಾವ ಮುಖಂಡನೂ
ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮಾಡಲಿಲ್ಲ ಒಂದಿಲ್ಲೊಂದು ವಿಘ್ನ ಬಂದವು ಹೀಗಾಗಿ
ಈಗ ಸದಾನಂದಗೌಡ್ರು ಕೆಳಗಿಳಿದರೆ ವೀರಶೈವರೆ ಮುಖ್ಯಮಂತ್ರಿಯಾಗಬೇಕು ಎಂಬ
ಹಕ್ಕೊತ್ತಾಯ ಮಾಡಿದ್ರು. ಬಿಜೆಪಿ ಅಧಿಕಾರಕ್ಕೆ ಬರಲು ಅ ಸಮುದಾಯದ ಕೊಡುಗೆ ಇದೆ
ಇಲ್ಲವಾದರೆ ದಕ್ಷಿಣಭಾರತದ ಹೆಬ್ಬಾಗಿಲು ತೆರೆಯುತ್ತಿರಲಿಲ್ಲ ಇದನ್ನು ಆದ್ವಾಣಿ,ಜೇಟ್ಲಿ ಸಹ
ಒಪ್ಪುತ್ತಾರೆ. ಆ ಸಮುದಾಯದವರೇ ನಾಯಕರಾಗಿದ್ದು ಗೌಡ್ರು ಮೋಸ ಮಾಡಿದ್ರು ಅನ್ನುವ
ಅನುಕಂಪ ಸೇರಿ ಅವರು ಮುಖ್ಯಮಂತ್ರಿಯಾದ್ರು. ಅವರಿಗೆ ಒತ್ತಾಯ ಹೇರಲಾಗಿತ್ತೋ ಅಥವಾ
ಉಪಕಾರಸ್ಮರಣೆಯೋ ಗೊತ್ತಿಲ್ಲ ಮಠಮಾನ್ಯಗಳಿಗೆ ಹೇರಳವಾದ ದೇಣಿಗೆ ಸರಕಾರದಿಂದ
ಸಿಕ್ಕಿತು. ಊರಲ್ಲಿನ ರಸ್ತೆ,ಹಳ್ಳಿಗಾಡಿನಲ್ಲಿ ಹೆಣ್ಣು ಮಕ್ಕಳಿಗೆ ಹೋಗಲು ಕಕ್ಕಸ್ಸು ಇಲ್ಲದಿದ್ದರೂ
ದೇಣಿಗೆ ನಿಲ್ಲಲಿಲ್ಲ. ಸರಕಾರದ ದೂರಾಲೋಚನೆ ಸರಿಯಾಗಿತ್ತು..ಅವಶ್ಯ ಬಿದ್ದಾಗ ಇಲ್ಲಿಯ
ಜಗದ್(?)ಗುರುಗಳು ಪರವಾಗಿ ನಿಂತರು. ತಮ್ಮ ಉಪಕಾರ ಬುದ್ಧಿ ತೋರಿದ್ರು. ಹಿಂದೆಂದೂ
ಆಗದ ರೀತಿ ಇದು ಮಠಗಳ ಮಾತು ವೇದವಾಕ್ಯವಾಯಿತು ಅಷ್ಟೇ ಅಲ್ಲ ತಮ್ಮ ಯಡವಟ್ಟುಗಳನ್ನು
ಮುಚ್ಚಿಹಾಕಲು ಸ್ವಾಮಿಗಳ ಕಾಲು ಹಿಡಿದರೆ ತಪ್ಪೇನಿಲ್ಲ ಅನ್ನುವ ಸ್ಥಿತಿ ಎಲ್ಲರಿಗು. ಕೆಲ ಮಠಾಧೀಶರು
ಮಧ್ಯಸ್ಥಿಕೆವಹಿಸಿ ರಾಜಿ-ಕಾಝಿ ಮಾಡ್ಸಿ ಹೆಸರು ಗಳಿಸಿಕೊಂಡ್ರು--ಉದಾ.ನಮ್ಮ ಅಬಕಾರಿ ಸಚಿವರ
ಪ್ರಸಂಗ.--.ಈ ರೀತಿ ಮಠಾಧೀಶರು ಜಪ ತಪ ಬಿಟ್ಟು ಹಿಂದೆ ರಾಜರ ಆಸ್ಥಾನದಲ್ಲಿ ಮೆರೆಯುತ್ತಿದ್ದ
ಮಂತ್ರಿಗಳಾದರು , ಮುಖ್ಯನಿರ್ಣಯಗಳು, ಮಂತ್ರಿ ಪದವಿ, ಸಂಪುಟ ವಿಸ್ತರಣೆ ಹೀಗೆ ಸ್ವಾಮಿಗಳ
ಪ್ರಭಾವಳಿ ಎಲ್ಲೆಲ್ಲೂ ಇದೆ. ಬಿಜೆಪಿ ಸರಕಾರದಲ್ಲಿ ಅತು ಮಿತಿಮೀರಿದೆ.ಈಗ ಕೊಡುಕೊಳ್ಳುವಿಕೆಯ
ವ್ಯವಹಾರದಲ್ಲಿ ಸಾಮನ್ಯ ಜನರಬಗ್ಗೆ ಅವರ ಸಮಸ್ಯೆಗಳನ್ನು ಆಲಿಸಲು ಯಾರಿಗಿದೆ ಪುರುಸೊತ್ತು.
ನಾವು ಏನೇ ಮಾಡಿದ್ರೂ ನಮ್ಮ ಹಿಂದೆ ಮಠಇದೆ ನಮ್ಮ ಸಮುದಾಯವಿದೆ ಅನ್ನುವ ಗರ್ವ ಬಂದಿದೆ
ಮೊನ್ನೆಯ ನೀಲಿಕಾಂಡವನ್ನೇ ತಗೊರ್ರಿ. ಅಥಣಿಯಲ್ಲಿ ಅಂದು ಕೇಬಲ್ ಟೀವಿ ಕತ್ತರಿಸಲಾಗಿತ್ತು..
ಮರುದಿನದ ಪೇಪರ್ ಬರದಹಾಗೆ ಮಾಡಲಾಯಿತು ಸವದಿಯ ಬೆಂಬಲಿಗರು ಪಾಳೇಗಾರರಂತೆ
ವರ್ತಿಸಿದರು.ಇಷ್ಟಾಗಿಯೂ ಅಲ್ಲಿದ್ದ ಒಬ್ಬ ಜಗದ್ಗುರು ಅವರದೇನೂ ತಪ್ಪಿಲ್ಲ ಹಾಗೂ ಸಮರಂಭ ಆಯೋಜಿಸಲು
ಹುನ್ನಾರಮಾಡಲಾಯಿತು.ಕೊನೆಗೆ ಆ ಗುರುವಿಗೆ ತಪ್ಪಿನ ಅರಿವಾಯಿತೇನೋ ಅದು ಸಾಧ್ಯಆಗಲಿಲ್ಲ.
ಮಠಗಳು ಯಾರಿಂದಲೂ ಸ್ಥಾಪಿತವಲ್ಲ ನಮ್ಮ ದೇಶದ ಯಾವುದೇ ಯುಗಪುರುಷ ತನ್ನ ನಂತರ
ಆರಾಧನೆ ನಿರಂತರವಾಗಲಿ ಎಂದು ಮಠಸ್ಥಾಪಿಸಲಿಲ್ಲ ಬದಲು ತಾವಿದ್ದಷ್ಟು ದಿನ ಸತ್ಕಾರ್ಯ ಮಾಡಿದರು,
ಒಳ್ಳೆಯದನ್ನು ಹೇಳಿದ್ರು ಒಳ್ಳೆಯದನ್ನ ಮಾಡಿದ್ರು. ಆದರೆ ಅವರ ಹೆಸರು ಹೇಳಿಕೊಂಡ ಅವರ ಶಿಷ್ಯ ಅನಿಸಿಕೊಂಡವರು
ಅವರ ವಚನ,ಪದ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು, ಗದ್ದಿಗೆ, ವೃಂದಾವನ ನಿರ್ಮಾಣ ಮಾಡಿದ್ರು
ಜನ ಮರುಳಾದ್ರು ಮುಗ್ಧತೆಯನ್ನೇ ಬಂಡವಾಳಮಾಡಿಕೊಂಡ ಶಿಷ್ಯರು ಮಠಾಧೀಶರಾದ್ರು ಅಡ್ಡಪಲ್ಲಕ್ಕಿ,
ಪಾದಪೂಜೆ ಇತ್ಯಾದಿ ಆಚರಣೆಗೆ ಬಂದವು. ನಿಜ ಧ್ಯೇಯ, ಕರ್ಮ, ಧರ್ಮ ಎಲ್ಲ ಮರೆತ್ರು..ಇಂಜಿನೀಯರಿಂಗ್ ,
ಮೆಡಿಕಲ್ ಕಾಲೇಜು ಆದವು. ಜಾತಿಗೊಂದರಂತೆ ಮಠಗಳಾದವು ಅವುಗಳ ಪೀಠ ಅಲಂಕರಿಸಲು
ಜಗದ್ಗುರುಗಳು ಉದ್ಭವವಾದರು.
ಎಲ್ಲೋ ಒಂದೆರಡು ಮಠ ಬಿಟ್ಟರೆ ಎಲ್ಲ ಮಠಗಳ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ..ಯಾರೂ ಪ್ರಶ್ನಿಸುವ
ಹಾಗಿಲ್ಲ ಅದರ ಮೂಲವನ್ನು. ಮಠಕಟ್ಟಿದ ಧ್ಯೇಯಗಳು ಗಾಳಿಗೆ ತೂರಿ ಹೋಗಿ ಅವು ದಲಾಲಿ ಅಂಗಡಿಗಳಾಗಿವೆ
ನಮ್ಮ ರಾಜ್ಯದಲ್ಲಿ ಇವುಗಳ ಪಿಡುಗು ವಿಪರೀತ. ಅದರಲ್ಲಿ ಈ ನಾಲ್ಕು ವರ್ಷದಲ್ಲಿ ಪುಕಾರು ಅತಿ ಆಗಿದೆ.
ಮಹಾರಾಷ್ಟ್ರದಲ್ಲೂ ಪುಣ್ಯ ಪುರುಷರಿದ್ದರು ತುಕಾರಾಮ್. ಗೋರ ಮುಂತಾಗಿ ಆದರೆ ಅವರ ಹೆಸರು ಬಳಸಿಕೊಂಡು
ಪೀಠನಿರ್ಮಿಸಿ ವ್ಯವಹರಿಸುವ ಬುದ್ಧಿ ಅವರಿಗೇಕೆ ಬರಲಿಲ್ಲವೋ.....

ನಾನೇ ಬರೆದ ಹನಿ ಇದೆ

ಇರುವುದೊಂದೇ ಜಗತ್ತು
ದಿನೆದಿನೇ ಕುಲಗೆಡುತ್ತಿದ್ದರೂ
ಉದಯಿಸುತ್ತಲೇ ಇದ್ದಾರೆ
ನಾಯಿಕೊಡೆಗಳಂತೆ...
ಈ ಜಗದ್ಗುರುಗಳು...!

ಬುಧವಾರ, ಜನವರಿ 18, 2012

ನಾವು ಹಾಗೂ ವಿವೇಕ





ನಾವು ಕೇಳಿದ ಓದಿದ ವ್ಯಕ್ತಿಯ ಬಗ್ಗೆ ನಮ್ಮದೇ ಆದ ಕಲ್ಪನೆಗಳಿರುತ್ತವೆ. ಅವರ ಬಗ್ಗೆ ನಮ್ಮದೇ ಆದ ನಿಲುವನ್ನು ತಳೆದಿರುತ್ತೇವೆ.
ದೇವಸ್ಥಾನ ಕೊಟ್ಟು ಗೌರವಿಸಿರುತ್ತೇವೆ. ಮುಂದೆ ಎಂದೋ ಆ ವ್ಯಕ್ತಿಯಬಗ್ಗೆ ಬೇರೆ ಅಭಿಪ್ರಾಯ ಕೇಳಿಬಂದಾಗ ನಮಗಾಗುವುದು
ಮೊದಲು ಸಿಟ್ಟು,ಕೋಪ ಇತ್ಯದಿ. ಅದು ತಿಳಿಯಾದಮೇಲೆ ಮನದಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ.ಹೌದೆ ಹೀಗೂ ಇರಲು ಸಾಧ್ಯವೇ
ಅಥವಾ ನಮ್ಮ ಆರಾಧ್ಯ ದೈವ ಈ ಕೆಳಮಟ್ಟ ನಿಜಕ್ಕು ತಲುಪಿದ್ದನೆ ಅಂತ. ನಾನಿಲ್ಲಿ ಉಲ್ಲೇಖಿಸುತ್ತಿರುವುದು ಪ್ರಜಾವಾಣಿಯಲ್ಲಿ
ಬಂದ ವಿವೇಕಾನಂದರ ಬಗೆಗಿನ ಲೇಖನದ ಬಗ್ಗೆ.

ದಿನೇಶ್ ಅಮಿನಮಟ್ಟು ನನ್ನ ಶತ್ರು ಅಲ್ಲ ಹಾಗೆಯೆ ವಿವೇಕಾನಂದರ ಅಥವಾ ರಾಮಕೃಷ್ಣ ಮಠದ ಅನುಯಾಯಿಯೂ ನಾ ಅಲ್ಲ.
ಅಭುವ್ಯಕ್ತಿ ಸ್ವಾತಂತ್ರ್ಯ ಇದು ಅವಿರತ ಕೇಳಿಬರುವ ಮಾತು.ದಿನೇಶ್ ಅವರ ಲೇಖನ ಒಂದುಕಡೆ ವಾಲಿದೆಯೆ ಅಥವಾ ಅಭುವ್ಯಕ್ತಿಯ
ಸೋಗಿನಲ್ಲಿ ಎಡಪಂಥೀಯ ಅಥವಾ ಹಿಂದೂವಿರೋಧಿಯೇ ಇದು ಗಮನಿಸತಕ್ಕದ್ದು.ಇದು ಅವರ ಸ್ವಂತ ವಿಚಾರವಲ್ಲ.ಬದಲು
ಮಣಿಸಂಕರ್ ಮುಖರ್ಜಿ ಬರೆದ ಪುಸ್ತಕ ಓದಿ ಈ ಲೇಖನ ಬರೆದಿದ್ದಾರೆ. ವಿವೇಕರ ಇನ್ನೊಂದು ಮುಖದ ಪರಿಚಯ ಇದು ಮಾಡಿಸುತ್ತದೆ.
ನಾವುಗಳು ಚಿತ್ರದಲ್ಲಿ ನೋಡಿದ ಆಕಾರಕ್ಕೆ ವಿರುದ್ಧವಾಗಿ ಅವರು ಬಡಕಲಾಗಿದ್ದರು ಮೇಲಾಗಿ ನಾನಾ ರೋಗಬಾಧೆಯಿಂದ ನರಳುತ್ತಿದ್ದರು--
ಲೇಖನದಲ್ಲಿ ರೋಗಗಳ ದೊಡ್ಡ ಪಟ್ಟಿ ಇದೆ--.ಇನ್ನೊಂದು ವಿಷಯ ಒತ್ತಿ ಹೇಳಲಾಗಿದೆ ಅವರು ಅನ್ಯಧರ್ಮೀಯರನ್ನು ಪ್ರೀತಿಸುತ್ತಿದ್ದರು
ಮ್ಲೇಚ್ಛರ ಜೊತೆ ಸಹವಾಸವಿತ್ತು.ಯೇಸುಬಗ್ಗೆ ಗೌರವವಿತ್ತು ಎಂಬುದನ್ನು ಹೇಳಲಾಗಿದೆ. ಹಾಗೆಯೇ ಹಿಂದು ಧರ್ಮದಲ್ಲಿ ಬೀಡುಬಿಟ್ಟಿರುವ
ಜಾತೀಯತೆ, ಮಡಿ,ಮೈಲಿಗೆಗಳ ಬಗ್ಗೆ ಅವರಲ್ಲಿ ಜುಗುಪ್ಸೆ ಇತ್ತು. ಹೀಗಾಗಿಯೇ ಅವರು ಸ್ವದೇಶಿಯರಲ್ಲಿ ಅಪ್ರಿಯರಾಗಿದ್ದರು.ಮ್ಲೇಚ್ಛ
ಜೊತೆ ಅವರು ಊಟಮಾಡುತ್ತಿದ್ದರು ಎಂಬ ಕಾರಣಕ್ಕಗಿಯೇ ಅವರನ್ನು ದ್ವೇಷಿಸುತ್ತಿದ್ದರು. ಇನ್ನು ಅವರು ತಿಂಡಿಪೋತರಾಗಿದ್ದರು
ಹಾಗೂ ಮಾಂಸಾಹಾರ ಅವರಿಗೆ ಪ್ರಿಯವಾಗಿತ್ತು ಎಂಬ ಉಲ್ಲೇಖವಿದೆ. ಹಿಂದೆ ನಮ್ಮ ಆದಿಮಾನವರೆಲ್ಲ ಅವರೆ ತಾನೆ ಕಾಲಸರಿದಂತೆ
ನಾವು ನಮ್ಮ ಮೇಲೆ ಅನೇಕ ಕಟ್ಟಳೆಗಳನ್ನು ಹೇರಿಕೊಂಡೆವು ಇದು ಮೇಧ್ಯ ಅದು ಅಮೇಧ್ಯ ಅಂತ. ಅದು ಸರಿನೋ ತಪ್ಪೊ ಗೊತ್ತಿಲ್ಲ
ವಿವೇಕರಿಗೆ ಈ ಕಟ್ಟುಪಾಡು ಸರಿ ಕಂಡಿರಲಿಕ್ಕಿಲ್ಲ ಹೀಗಾಗಿ ಇದನ್ನು ವಿರೋಧಿಸುತ್ತಿದ್ದರು ಮಾತ್ರವಲ್ಲ ತಮ್ಮ ಈ ನಡಾವಳಿಯಿಂದ
ಅನೇಕರ ವಿರೋಧವನ್ನು ಅವರು ಎದುರಿಸಿದ್ದರು.
ಲೇಖನ ಅನೇಕ ಪ್ರಶ್ನೆಗಳನ್ನು ಎತ್ತುತ್ತೆ. ನಾವು ಪೂಜಿಸಿಕೊಂಡು ಬಂದವರ ಬಗ್ಗೆ ನಮಗೆಷ್ಟು ಅರಿವಿದೆ ಅವರು ಪ್ರಶ್ನಾತೀತರೆ
ಅವರ ಜೀವನಶೈಲಿಯ ಬಗ್ಗೆ ವಿಮರ್ಶಿಸುವುದು ತಪ್ಪೇ ಅಂತ.ನಮ್ಮಲ್ಲಿ ಪುರಾಣಗಳಿವೆ ಮಹಾಕಾವ್ಯಗಳಿವೆ ಹಾಗೆಯೇ ವೇದ ಗಳಿವೆ
ನಿಜ. ಆದರೆ ರಾಮನ ಗುಣಸ್ವಭಾವವನ್ನಾಗಲಿ ಅಥವಾ ಕೃಷ್ಣನ ಲೀಲೆಗಳ ಬಗ್ಗೆಯಾಗಲಿ ನಾವು ಹಗುರವಾಗಿ ಮಾತನಾಡುವಂತಿಲ್ಲ
ಮುಖ್ಯವಾಗಿ ಈ ಮಹಾನಾಯಕರ ಸಾಹಸಗಳ ಬಗ್ಗೆ ಪೀಳಿಗೆಯಿಂದ ಪೀಳಿಗೆ ವರೆಗೆ ಗುಣಗಾನವೇ ಪ್ರಾಮುಖ್ಯತೆ ಪಡೆದಿದೆ.
ಹೋಗಲಿ ಇತ್ತೀಚೆಗಿನ ಬಸವ, ಬುದ್ಧ ಹಾಗೂ ಅಂಬೇಡ್ಕರ್ ಬಗ್ಗೆ ನಮಗೆ ತಿಳಿದ ಅನೇಕ ಸಂಗತಿಗಳಿವೆ ಆದರೆ ಇಲ್ಲೂ ಅವರ ಗುಣಗಾನವೇ
ಪ್ರಧಾನವಾಗಿ ಒಂದು ಗುಂಪಿನ ದನಿಯೇ ದೊಡ್ದದಾಗಿ ನಾವು ಎತ್ತುವ ಪ್ರಶ್ನೆಗಳು ಕ್ಷೀಣವಾಗಿ ಬಿಡುವ ಭಯಇದೆ ಹಾಗೂ ಇದು ವಾಸ್ತವ ಕೂಡ.
ಅದರಲ್ಲೂ ರಾಜಕೀಯದ ಕರಿನೆರಳು ಎಲ್ಲ ಕಡೆ ಆವರಿಸಿದೆ ರಾಜಕೀಯಲಾಭದ ಮುಂದೆ ಅಭಿಪ್ರಾಯಗಳಿಗೆಲ್ಲಿದೆ ಕಿಮ್ಮತ್ತು.
ಅಭಿವ್ಯಕ್ತಿ ಸ್ವಾತಂತ್ರ್ಶ ಇದು ಬರೀ ಹುಸಿ ಅನ್ನುವುದು ಸಲ್ಮಾನ್ ರಶ್ದಿಯ ಭಾರತ ಭೇಟಿಗೆ ಉಂಟಾದ ವಿರೋಧದಿಂದಲೆ ಗೊತ್ತಾಗುತ್ತದೆ.
ಇಂತಹ ಸಂಧಿಗ್ಧತೆಯಲ್ಲೂ ಧೈರ್ಯವಾಗಿ ಪ್ರಶ್ನೆ ಎತ್ತಿದ ದಿನೇಶ್ ಅಭಿನಂದನೆಗೆ ಅರ್ಹರು ಅಲ್ಲವೆ.

ಶನಿವಾರ, ಡಿಸೆಂಬರ್ 17, 2011

ನಾ ಹೀಗೇಕೆ..

ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು.
ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ
ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಇನ್ನೂ ಇದೆ
ಹೀಗಾಗಿ ನಾವು ಪೆನ್ನಿಂದ,ಕೀಲಿಮಣೆ ಕುಟ್ಟುವುದರಿಂದ ನಮ್ಮ ಕಹಿಭಾವನೆಗಳನ್ನು
ಮುಕ್ತವಾಗಿ ಕಾರುತ್ತೇವೆ. ಅದು ನಮ್ಮ ಹಕ್ಕು ನಿಜ. ಅದನ್ನು ನಾವು ಚಲಾಯಿಸುತ್ತೇವೆ ಕೂಡ.
ಅನೇಕ ರೀತಿಯಲ್ಲಿ ಅಂದರೆ ಫೇಸಬುಕ್, ಟ್ವೀಟರ್ ಹಿಡಿದು ವಾಚಕರ ವಾಣಿವರೆಗೂ ನಮ್ಮ
ಆಕ್ರೋಶ ಹರಿಯುತ್ತದೆ. ನಮ್ಮ ಈ ಕಾರುವಿಕೆಯಿಂದ ಏನಾದರೂ ಬದಲಾಗಿದೆಯೇ..
ನಮ್ಮ ಬೀದಿಯಲ್ಲಿ ಹಗಲು ದೀಪ ಉರಿಯುವುದು ಬಂದಾಗಿದೆಯೇ..ನಮ್ಮ ನಲ್ಲಿಯಲ್ಲಿ ನೀರು
ನಿರಂತರ ಹರಿಯುತ್ತಿದೆಯೇ ಅಥವಾ ಉಗಿಸಿಕೊಂಡೂ ಕುರ್ಚಿಮೇಲೆ ಕೂಡುವ ರಾಜಕಾರಣಿ
ಒಂದರೆಕ್ಷಣ ವಿಚಾರ ಮಾಡಿದ್ದಾನೆಯೇ..? ಈ ಪ್ರಶ್ನೆಗಳಿಗೆ ಪರಿಹಾರ ಸಿಕ್ಕಿಲ್ಲ ಯಾಕೆಂದರೆ
ಇವು ನಾವು ಈಗಿರುವ ಸದ್ಯದ ಪರಿಸ್ಥಿತಿಯ ದ್ಯೋತಕ ವಾಗಿವೆ. ಹಾಗೂ ಇವುಗಳಿಗೆ ನಾವು
ಚೆನ್ನಾಗಿ ಒಗ್ಗಿಕೊಂಡಿರುವೆವು..ನಮಗೂ ಗೊತ್ತು ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ ಅಂತ.
ಆದರೇ ಕಾರುವುದು ಇನ್ನೂ ನಿಂತಿಲ್ಲ ..ಈಗ ಅದು ಹೊಸ ಆಯಾಮ ಪಡೆದುಕೊಂಡಿದೆ
ನಮಗೆ ನಮ್ಮ ದನಿ ಕೇಳಿಸಲು ಹೊಸ ಮುಖವಾಡಗಳು ಬಂದಿವೆ...ಅವರನ್ನು ನಾವು ನಮ್ಮನ್ನು
ಉದ್ಧಾರ ಮಾಡಲೆಂದೆ ಬಂದ ಅವತಾರಪುರುಷ ರನ್ನಾಗಿ ನೋಡುತ್ತಿದ್ದೇವೆ..ಜೈಕಾರ ಹೇಳುತ್ತಿದ್ದೇವೆ
ಅವರು ನಮ್ಮ ಸಲುವಾಗಿ ಉಪವಾಸ ಕೂತಿದ್ದಾರೆ.ಮರಗುತ್ತಿದ್ದಾರೆ ಕೂಡ.

ಹೌದು ಅಣ್ಣಾಹಜಾರೆ ಇಂದು ಅನೇಕರ ಕಣ್ಣಲ್ಲಿ ಹಿರೋ. ಗೂಗಲ್ ಕ್ಲಿಕ್ನಲ್ಲಿ ಅವರು ಕತ್ರೀನಾಗಿಂತ
ಹಿಂದಿದ್ದರೂ ಅವರ ಹೆಸರು ಈಗ ಎಲ್ಲರ ನಾಲಿಗೆಮೇಲೆ ಇದೆ.ಸರಕಾರಕ್ಕೂ ನಡುಕವಿದೆ..
ರಾವಲ್ಗಾವ್ ಸಿದ್ದಿಯಿಂದ ದೆಹಲಿವರೆಗೆ ಅಣ್ಣಾ ಪಯಣಿಸಿದ್ದಾಗಿದೆ.ಮೊನ್ನೆ ಸಿಎನೆನ್-ಐಬಿನ್ ಅವರು
ಪ್ರಶಸ್ತಿ ಸಹ ನೀಡಿ ಗೌರವಿಸಿದ್ದಾರೆ. ಜನಲೋಕಪಾಲ್ ದಲ್ಲಿ ತಮ್ಮ ಅಂಶಗಳನ್ನು ಸೇರಿಸಿಕೊಳ್ಳದಿದ್ದಲ್ಲಿ
ಜೇಲ್ ಭರೋ ಸುರುಮಾಡುವುದಾಗಿ ಅವರು ಕರೆ ನೀಡಿದ್ದಾರೆ.ಅವರ ಮಾತಿನಲ್ಲಿ ತೂಕವಿದೆ ಜನ
ಏನೋ ಪವಾಡದ ನಿರೀಕ್ಷೆಯಲ್ಲಿದ್ದಾರೆ.ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ
ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕೆಲವರಾದರೂ ಯೋಚಿಸುತ್ತಿದ್ದಾರೆಯೇ ಅಥವ ಕೆಲ ಬುದ್ಧಿಜೀವಿಗಳು
ಹೇಳುವ ಹ್ಆಗೆ "ಸಮೂಹ ಸನ್ನಿ"ಯ ಪ್ರಭಾವಳಿಯ ಶಿಕಾರಿಯಾಗುತ್ತಿದ್ದೇವೆಯೇ..? ಹೌದು ಈ ಪ್ರಶ್ನೆ
ನನ್ನನ್ನು ಕಾಡುತ್ತಿದೆ. ಈ ಚಳುವಳಿಗಳು ಬೇಕಾಗಿದ್ದವು ಯಾಕ ಅಂದರ ನಾವು ಆರಿಸಿ ಕಳಿಸಿದ, ನಮ್ಮ ನೆಲ
ಜಲ,ಪ್ರಾಣಗಳ ರಕ್ಷಣೆಯ ಜವಾಬ್ದಾರಿ ಹೊತ್ತು ವಿಧಿವಿಧಾನ ತಗೊಂಡ ರಾಜಕಾರಣಿಗಳು ತಮ್ಮ ಹೆಸರಲ್ಲಿ,
ಮಕ್ಕಳ ಹೆಸರಲ್ಲಿ ಆಸ್ತಿ ಮಾಡಕೊಂಡ್ರು..ನಮ್ಮ ದುಡ್ಡಿನ್ಯಾಗ ಮಾರಿಷಸ್ ಗೆ ಕುಟುಂಬ ಸಮೇತ ಪ್ರವಾಸ ಮಾಡಿ
ಬಂದ್ರು ಹಂಗ ಸ್ವಾಮಿಗೋಳಿಗೆ ದಕ್ಷಿಣಿ ಕೊಟ್ಟು ಅಡ್ಡೂ ಬಿದ್ರು..!! ನಮಗ ಇದೆಲ್ಲ ನೋಡಿ ರೋಸಿ ಹೋಗಿತ್ತು.
ಒಂದು ಬದಲಾವಣಿ ಬೇಕಾಗಿತ್ತು.ಇಂಥಾ ಟೈಮದಾಗ ಅಣ್ಣಾ, ರಾಮದೇವ್, ಬೇಡಿ ಇವರು ಅವತಾರ ಪುರುಷರಾಗಿ
ಕಂಡ್ರು. ಅವರ ಹಿಂದ ಹೊರಟೇವಿ ದಡಾ ಮುಟ್ಟತೇವೋ ಇಲ್ಲೋ ಗೊತ್ತಿಲ್ಲ. ಆದ್ರ ಈ ದೋಣಿಯಾನದಾಗ
ನನ್ನಂಥ ಸಿನಿಕರೂ ಸೇರಿಕೊಂಡಾರ. ನನಗ ಹಲವಾರು ಪ್ರಶ್ನೆಗಳಿವೆ..ಉತ್ತರ ಹುಡುಕಿ ಸೋತಿರುವೆ..

೧) ಅಣ್ಣಾ ಚಳುವಳಿಗೆ ಈಗ ವಿರೋಧ ಪಕ್ಷದ ಬೆಂಬಲ ಸಿಕ್ಕಿದೆ. ಭಾಜಪ, ಅಥವಾ ಎಡಪಂಥೀಯರು ತಾವು
ಪ್ರಾಮಾಣಿಕರು..ಎಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲರೇ..? ಅವರು ಆಳಿದ/ಆಳುತ್ತಿರುವ ರಾಜ್ಯದಲ್ಲಿ
ಲಂಚಗುಳಿತನ ಇರಲಿಲ್ಲವೇ,,?ಹಾಗಿದ್ದರೆ ಯಾವ ನೈತಿಕತೆ ಮೇಲೆ ಅವರು ಅಣ್ಣಾ ಜೊತೆ ವೇದಿಕೆ ಹಂಚಿಕೊಂಡ್ರು
ಸ್ವತಃ ಅಣ್ಣಾ ಅವರಿಗೆ ಈ ದ್ವಂದ್ವ ಕಾಡಲಿಲ್ಲವೇ...?
೨) ಅಣ್ಣಾ ಉಪವಾಸ ಮಾಡುತ್ತಾರೆ.ಜನ ಸ್ವಪ್ರೇರಣೆಯಿಂದ ಸೇರುತ್ತಾರೆ. ಹಾಡು,ಭಜನೆ ಇತ್ಯಾದಿ ನಡೆಯುತ್ತವೆ. ಆಣ್ಣಾ
ಕುಳಿತುಕೊಳ್ಳುವ ಪೆಂಡಾಲು, ಜನರ ಉಸ್ತುವಾರಿ ಇವುಗಳಿಗೆಲ್ಲ ದುಡ್ಡು ಬೇಕು. ಆ ದುಡ್ಡು ಬಂದ ಮೂಲಯಾವುದು
ಅದೇನು ಚಂದಾಹಣವೇ ಅಥವಾ ದಾನಿಯೊಬ್ಬ ಕೊಟ್ಟ ಬಳುವಳಿಯೇ , ಒಂದು ವೇಳೆ ದಾನಿ ಕೊಟ್ಟಿದ್ದರೆ ಅವನ
ವಿವರಗಳೇನು ಅಥವ ಆ ದುಡ್ಡು ತೆರಿಗೆ ತಪ್ಪಿಸಿ ಇಲ್ಲಿ ಸುರಿದದ್ದೋ?

ಹೌದು ಮೇಲಿನ ಪ್ರಶ್ನೆ ನೋಡಿ ನನ್ನ ಮೊಸರಿನಲ್ಲಿ ಕಲ್ಲುಹುಡುಕುವ ಚಾಳಿಯವ ಅಂತ ನೀವು ಕರೆಯಬಹುದು.
ಆದರೆ ಒಂದು ಜನಾಂದೋಲನ ಯಶಸ್ಸು ಕಾಣಬೇಕು ಇದು ನನ್ನ ಹಂಬಲ ಕೂಡ ಆದರೆ ಜೊತೆಗೆ ಮೇಲಿನ
ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಇದು ಬಯಕೆ..!

ಭಾನುವಾರ, ಜೂನ್ 19, 2011

ಇದರ ಕತೆ ಇಷ್ಟೇ ಕಣಪ್ಪೋ....









ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ
ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು
ಅವರ ಪಂಥಾಹ್ವಾನ ಸ್ವೀಕರಿಸಿ ಧರ್ಮಸ್ಥಳದಲ್ಲಿ ಒಂದುದಿನ ಮೊದಲೇ ಹೋಗಿ
ತಯಾರಿಯಲ್ಲಿರುತ್ತಾರಂತೆ. ಈ ಬಿಜೆಪಿ ಸರಕಾರ ಏಳುತ್ತ ಬೀಳುತ್ತ ಮೂರು ವರ್ಷ
ಕಳೆದಿದೆ. ಈಗ ಮಾಜಿ ಸಿಎಮ್ಮು ಈಗಿನ ಸಿಎಮ್ಮ ಬಗ್ಗೆ ಮೂರುವರ್ಷದಲ್ಲಿ ಮುನ್ನೂರು
ಬಾರಿ ಅಪವಾದ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಹಾಲಿ ನಮ್ಮ ಸಿಎಮ್ಮು
ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಮಾಜಿ ವಿರುಧ್ದ
ಅನೇಕ ದಾಖಲೆ ಬಿಡುಗಡೆ ಮಾಡಿದಾರೆ. ಒಟ್ಟಿನಲ್ಲಿ ಈ ಮೂರುವರ್ಷದಲ್ಲಿ ನಾಡಿನ
ಜನತೆಗೆ ಭರಪೂರ್ ಮನರಂಜನೆ ಕೊಟ್ಟಿದ್ದಾರೆ. ಈಗ ಕ್ಲೈಮಾಕ್ಸ್ ಹೊತ್ತು .
ಇಲ್ಲಿ ನಾಯಕರೂ ಇಲ್ಲ ಖಳರೂ ಇಲ್ಲ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಯುಧಗಳಿಗೆ
ಅವಕಾಶ ಇಲ್ಲ. ಹೀಗಾಗಿ ಅಲ್ಲಿ ರಕ್ತಪಾತಕೆ ಆಸ್ಪದವಿಲ್ಲ. ಆದರೆ ದೇವರ ಸನ್ನಿಧಿಯಲ್ಲಿ
ಸುಳ್ಳು ಹೇಳಿದರೆ/ಸುಳ್ಳು ಆಣೆ ಹಾಕಿದವ ರಕ್ತ ಕಾರಿಕೊಂಡು ಸಾಯುತ್ತಾನೆ ಅಂತ ಪ್ರತೀತಿ.
ಈಗ ಈ ಹಾಲಿ ಅಥವಾ ಮಾಜಿ ಇಬ್ಬರಲ್ಲಿ ಒಬ್ಬರು ರಕ್ತಕಾರುವುದಂತೂ ನಿಕ್ಕಿ.ನನಗೆ
ಕುತೂಹಲ ಇರೋದು ಆ ರಕ್ತದ ಬಣ್ಣದ ಬಗ್ಗೆ...! ನಂಜು ನುಂಗಿ ಅದ ಉಗುಳಿದವರ ರಕ್ತ
ಕೆಂಪಗಿರಲು ಹೇಗೆ ಸಾಧ್ಯ??
ಯಾಕೆ ಹೀಗಾಗುತ್ತಿದೆ ಅಂತ ಯಾವುದೇ ಶ್ರೀ ಸಾಮಾನ್ಯ ತಲೆ ಕೆಡಿಸಿಕೊಳ್ಳುತ್ತಿಲ್ಲ
ತನ್ನ ಸುತ್ತಲಿನ ತನ್ನ ಕವಿದಿರುವ ಸಮಸ್ಯೆಗಳ ಬೆಂಕಿಗೆ ಅವ ಮೈಯೊಡ್ಡಿ ಹಿತ ಅನುಭವಿಸುತ್ತಿದ್ದಾನೆ
ಆದರೆ ಮೀಡಿಯಾದವರ ಹೊಟ್ಟೆ ಹಸಿವು ಅಗಾಧ ಹಿತ ಅನುಭವಿಸಲು ಬಿಟ್ಟರೆ ಅವರು ಉಸಿರಾಡುವುದು
ಹೇಗೆ ಅದಕ್ಕೇ ಅವರು ಅವನನ್ನು ತಿವಿದು ಎಚ್ಚರಿಸಿ ೨೭/೦೬/೨೦೧೧ ರಂದು ನಡೆಯಲಿರುವ ಆಣೆಪ್ರಕರಣ
ದ ಬಗ್ಗೆ ಅಭಿಪ್ರಾಯ ಹೇಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಲಿ ಮಾಜಿ ಕದನ ಇತಿಹಾಸದಲ್ಲಿ
ಮೊದಲ ಬಾರಿ ಆಗುತ್ತಿರುವುದು ಹೀಗಾಗಿ ಇದನ್ನು ಕವರ್ ಮಾಡಲು ಪುಡಿಹುಡಿ ಚಾನಲ್ ಗಳಲ್ಲದೇ
ಫಾಕ್ಸ್, ಸಿಎನ್ ಎನ್ ಹಾಗೂ ಬಿಬಿಸಿ ಯವರು ಬರಲಿದ್ದಾರೆ. ಈಗಾಗಲೇ ಧರ್ಮಸ್ಥಳದ ಲಾಜ್ ಎಲ್ಲ
ಬುಕ್ ಆಗಿವೆ. ಇದೇ ಸಂಧರ್ಭ ಲಾಭಮಾಡಿಕೊಳ್ಳಲು ಶ್ರೀ ಕ್ಷೇತ್ರದ ಸುತ್ತಲಿನ ಯಾತ್ರಾಸ್ಥಳದವರೂ
ತಮ್ಮ ತಮ್ಮ ದೇವರ ದರ್ಶನ ದ ರೇಟು ಕಮ್ಮಿ ಮಾಡಿಕೊಂಡು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ೨೭/೦೬/೧೧ ರಂದು ನಡೆಯಲಿರುವ ಐತಿಹಾಸಿಕ ದಿನದ ಪೂರ್ವ ಮಾಹಿತಿ ಎಲ್ಲರಿಗಿಂತ
ಮೊದಲೇ ಎಕ್ಸಕ್ಲೂಸಿವ್ ಆಗಿ ನೀಡಿದ ಈ ಬ್ಲಾಗಿನ ಟಿಆರ್ ಪಿ ಹೆಚ್ಚಿಗೆಯಾಗಲಿದೆ.ಇದು ಸತ್ಯ ಈ

ಬಗ್ಗೆ ನಾನೂ ಬೇಕಾದರೆ ಆಣೆ ಮಾಡಿ ನಿರೂಪಿಸಿಯೇನು.....!!!