ಶನಿವಾರ, ಮಾರ್ಚ್ 5, 2011

ಕನ್ನಡವೆನೆ ಎನ್ನೆದೆ...

ಇತ್ತೀಚೆಗಿನ ಎರಡು ಸಂಗತಿಗಳು ನಮ್ಮ ಕನ್ನಡ ನುಡಿ ಈ ರಾಜ್ಯದ ಘನತೆ ಬಗ್ಗೆ ಹತ್ತು ಹಲವು ವಿಚಾರಗಳ ಚರ್ಚೆಗೆ ವೇದಿಕೆಯಾಗಿವೆ.
ಅದು ಹೇಮಾಮಾಲಿನಿ ನಮ್ಮ ರಾಜ್ಯದಿಂದ ಆರಿಸಿ ಬಂದಿದ್ದಿರಬಹುದು ಅಥವಾ ಬೆಳಗಾವಿಯಲ್ಲಿ ನಾರಾಯಣ ಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿರುವುದು.
ಇವೇ ಆ ಎರಡು ವಿದ್ಯಮಾನಗಳು. ಪತ್ರಿಕೆಯಲ್ಲಿ ಮಾತ್ರವಲ್ಲದೇ ನೆಟ್ ಲೋಕದಲ್ಲು ಚರ್ಚೆಗೆ ಗ್ರಾಸವಾಗಿತ್ತು. ಇದು ಒಳ್ಳೆಯ ಬೆಳವಣಿಗೆ. ಚರ್ಚೆ ಯಾವಾಗಲೂ ಭಿನ್ನ ದನಿ
ಗಳನ್ನು ಕೇಳಿಸುತ್ತದೆ. ಮತ್ತು ಭಿನ್ನ ಸ್ವರ ಕೇಳಿಸುತ್ತದೆ..ಆದರೆ ಪೂರ್ವಾಗ್ರಹ ಪೀಡಿತ ಕಿವಿಗಳಿಗೆ ಭಿನ್ನ ರಾಗ ಬೇಕಾಗಿಲ್ಲ.ಫೇಸ್ ಬುಕ್ ನಲ್ಲಿ ನಾ ಹಾಕಿದ ಕಾಮೆಂಟಿಗೆ
ಉತ್ತರವಾಗಿ ನನ್ನ ಮಾತೃಭಾಷೆ ಯಾವುದೆಂದು ಪ್ರಶ್ನಿಸಲಾಯಿತು. ನಾ ಅದಕ್ಕೆ ಸರಿಯಾದ ಉತ್ತರ ಕೊಟ್ಟೆ. ಸ್ನೇಹಿತ ರೋರ್ವರು ಬರೆಯುತ್ತ ವಿಶ್ವಕನ್ನಡ ಸಮ್ಮೇಳನ
ಮಲ್ಯ ಅವರು ಉದ್ಘಾಟಿಸಲಿ ಎಂದು ಕುಹಕವಾಡಿದರು. ಈಗ ಮೂರ್ತಿ ಅವರಿಗೂ ಇರಿಸುಮುರಿಸಾಗಿ ನಮ್ಮ ಮುಖ್ಯಮಂತ್ರಿ ಜೊತೆ ನಕಾರ ಸೂಚಿಸಿದ್ದರೂ ತಮ್ಮ ಮೂಗು
ಎಲ್ಲಿ ಮಣ್ಣಾಗುತ್ತದೆ ಎಂಬ ಹೆದರಿಕೆ ಸರಕಾರಕ್ಕೂ ಬಂದು ಶತಾಯ ಗತಾಯ ಮೂರ್ತಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ ಅಂತ ಹೇಳಿಕೆ ಬಂದಿದೆ.
ಇರಲಿ ನನ್ನದೊಂದು ಮೂಲಪ್ರಶ್ನೆ ಇದೆ. ಈ ಸಮ್ಮೇಳನ ಯಾಕೆ ನಾವು ಕನ್ನಡದವರು ವಿಶ್ವದಾದ್ಯಂತ ಕನ್ನಡ ಪ್ರೇಮಿಗಳಿದ್ದಾರೆ ಅವರು ಒಂದೆಡೆ ಸೇರಿ ಉತ್ಸವ
ಆಚರಿಸುತ್ತಾರೆ. ನಿಜ ಅದರಿಂದ ಏನು ಸಾಧಿಸುವೆವು ನಾವು ಉತ್ತರ ಗೊತ್ತಿದ್ದೆ. ಶೂನ್ಯ. ಕನ್ನಡತನ ನಿಧಾನವಾಗಿ ನಶಿಸಿಹೋಗಿದೆ. ನಾ ಬೆಂಗಳೂರಲ್ಲಿ ಇದ್ದು
ನಾಲ್ಕು ವರ್ಷ ಮುಗಿದಿವೆ. ದಿನೇ ದಿನೇ ಕನ್ನಡ ಸಾಯುವುದನ್ನೇ ನೋಡುತ್ತಿರುವೆ. ಬೆಂಗಳೂರಿನಲ್ಲಿ ಪ್ರತಿಶತ ೩೨ ಮಾತ್ರ ಕನ್ನಡಿಗರಿದ್ದಾರೆ ಅಂತ ಸರ್ವೆ ಹೇಳುತ್ತದೆ.
ಇಲ್ಲಿ ಜನ ಈ ಮೊದಲು ತಮಿಳರನ್ನು, ಮಲೆಯಾಳಿಗರನ್ನು ಕೈ ಬೀಸಿ ಕರೆದರು ಇಲ್ಲಿಯ ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗರನ್ನು ಹಿಂದಿಕ್ಕಿ ಅವರು ಮೆರೆದಾಗ ಹಲ್ಕಿರಿದು
ಅವರ ಬಾಲಬಡಿದರು. ಈಗ ಐಟಿ ಬಿಟಿಗಳಲ್ಲೂ ಅದೇ ಹಾಡು. ಕನ್ನಡಿಗರು ಮರೆಯಾಗಿದ್ದಾರೆ ಮೂರ್ತಿ ಮುಂತಾದವರು ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ ಅಂತ ಬೊಬ್ಬೆ
ಹೊಡೆಯುವುದೇಕೆ..ಬಹುತೇಕ ಐಟಿ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿರುವವರು ಕನ್ನಡೇತರರು. ಹೀಗಾಗಿ ಸಹಜವಾಗಿಯೇ ಸ್ವಭಾಷಾ ಉದಾರತೆ
ಇರುತ್ತದೆ. ಇನ್ನು ಇದಕ್ಕೆ ನಾವು ಅಂದರೆ ಕನ್ನಡಿಗರು ಕಾರಣಕರ್ತರು. ಇತರೆ ರಾಜ್ಯದವರಹಾಗೆ ನಾವು ಕೆಲಸ ಮಾಡಲಾರೆವು. ನಮ್ಮಲ್ಲಿ dignity of labour ಇದೆ.
ಬಿಎಮಟಿಸಿ ಯಲ್ಲಿ ಕೆಲಸಕ್ಕಿರುವ ಚಾಲಕ ನಿರ್ವಾಹಕ ರಲ್ಲಿ ಬಹುಪಾಲು ಜನ ಬೆಂಗಳೂರು ಹೊರಗಿನವರೇ...! ಹೋಗಲಿ ಬಡಾವಣೆಯ ಹೆಸರಾಗಲಿ ,ಸ್ಟಾಪ್ ಆಗಲಿ
ಕನ್ನಡ ದಲ್ಲಿವೇಯೇ..ಕೆಂಬನಿ ಅಂದರೆ ಇಲ್ಲಿ ಯಾರಿಗೂ ಗೊತ್ತೇ ಆಗೂದಿಲ್ಲ ಅದೇ ಮೆಜೆಸ್ಟಿಕ್ ಅಂದರೆ ಬಲ್ಬು ಹೊತ್ತಿಕೊಳ್ಳುತ್ತೆ. ಇನ್ನೆಷ್ಟು ದಿನ ನಾವು ಈ ವೈಯಾಲಿ ಕಾವಲ್,
ಕೆ ಆರ್ ಪುರಂ, ಮಲ್ಲೇಶ್ವರಂ , ಫೋರ್ತ್ ಬ್ಲಾಕ್, ನಾರ್ತ್ ರೋಡ್ ಅಂತ ಹೇಳಬೇಕೋ ಗೊತ್ತಿಲ್ಲ. ಮದ್ರಾಸು ಚೆನ್ನೈ ಆಗಿ ಬಹಳೇ ದಿನ ಆದ್ವು. ಬ್ಯಾಂಗಲೋರ್ ಇನ್ನೂ
ಬೆಂಗಳೂರು ಆಗಿಲ್ಲ. ನಮ್ಮ ಪೀಳಿಗೆಗೆ ಆ ದಿನ ನೋಡುವ ಭಾಗ್ಯವೂ ಇರಲಿಕ್ಕಿಲ್ಲ.
ಹಳೇ ಮೈಸೂರು ಕಡೆ ಜನ ರಾಜಕೀಯ ಮಾಡಿ ಉತ್ತರ ಕರ್ನಾಟಕಕ್ಕೆ ಯಾವ ಅಭಿವೃದ್ಧಿಯೂ ಸಿಗದಂತೆ ನೋಡಿಕೊಂಡ್ರು. ನಮ್ಮ ಕಡೆ ಜನ, ನಮ್ಮ ಭಾಷೆ ನಮ್ಮ ಆಹಾರ
ಇವರಿಗೆ ಅಲರ್ಜಿ. ನಮ್ಮ ಮಾಜಿ ಪ್ರಧಾನಿ ಹುಬ್ಬಳ್ಳಿಗೆ ನೈರುತ್ಯರೇಲ್ವೆ ವಲಯ ಬರುವದನ್ನು ವಿರೋಧಿಸಿದ ರೀತಿ ಇನ್ನೂ ಹಸಿರಾಗಿದೆ. ಮೊದಲು ಕರ್ನಾಟಕ ಅಖಂಡವಾಗಲಿ
ಈ ಪ್ರಾಂತ ಭಾಷೆ ಇವುಗಳಲ್ಲಿನ ಹೀಗಳೆಯುವಿಕೆ ನಿಲ್ಲಲಿ. ಆಮೇಲೆ ಈ ವಿಶ್ವ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳಿಗೊಂದು ಅರ್ಥ ಬರುತ್ತದೆ. ಇಲ್ಲವಾದರೆಇದು ನಮ್ಮ ತೆರಿಗೆ
ದುಡ್ಡಿನಲ್ಲಿ ಈ ಕೊಳಕು ರಾಜಕಾರಣಿಗಳು ತಿಂದು ತೇಗಿ ಹೊಲಸುಮಾಡುವ ಒಂದು ಜಾತ್ರೆ ಮಾತ್ರ.