ಶನಿವಾರ, ಡಿಸೆಂಬರ್ 17, 2011

ನಾ ಹೀಗೇಕೆ..

ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು.
ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ
ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಇನ್ನೂ ಇದೆ
ಹೀಗಾಗಿ ನಾವು ಪೆನ್ನಿಂದ,ಕೀಲಿಮಣೆ ಕುಟ್ಟುವುದರಿಂದ ನಮ್ಮ ಕಹಿಭಾವನೆಗಳನ್ನು
ಮುಕ್ತವಾಗಿ ಕಾರುತ್ತೇವೆ. ಅದು ನಮ್ಮ ಹಕ್ಕು ನಿಜ. ಅದನ್ನು ನಾವು ಚಲಾಯಿಸುತ್ತೇವೆ ಕೂಡ.
ಅನೇಕ ರೀತಿಯಲ್ಲಿ ಅಂದರೆ ಫೇಸಬುಕ್, ಟ್ವೀಟರ್ ಹಿಡಿದು ವಾಚಕರ ವಾಣಿವರೆಗೂ ನಮ್ಮ
ಆಕ್ರೋಶ ಹರಿಯುತ್ತದೆ. ನಮ್ಮ ಈ ಕಾರುವಿಕೆಯಿಂದ ಏನಾದರೂ ಬದಲಾಗಿದೆಯೇ..
ನಮ್ಮ ಬೀದಿಯಲ್ಲಿ ಹಗಲು ದೀಪ ಉರಿಯುವುದು ಬಂದಾಗಿದೆಯೇ..ನಮ್ಮ ನಲ್ಲಿಯಲ್ಲಿ ನೀರು
ನಿರಂತರ ಹರಿಯುತ್ತಿದೆಯೇ ಅಥವಾ ಉಗಿಸಿಕೊಂಡೂ ಕುರ್ಚಿಮೇಲೆ ಕೂಡುವ ರಾಜಕಾರಣಿ
ಒಂದರೆಕ್ಷಣ ವಿಚಾರ ಮಾಡಿದ್ದಾನೆಯೇ..? ಈ ಪ್ರಶ್ನೆಗಳಿಗೆ ಪರಿಹಾರ ಸಿಕ್ಕಿಲ್ಲ ಯಾಕೆಂದರೆ
ಇವು ನಾವು ಈಗಿರುವ ಸದ್ಯದ ಪರಿಸ್ಥಿತಿಯ ದ್ಯೋತಕ ವಾಗಿವೆ. ಹಾಗೂ ಇವುಗಳಿಗೆ ನಾವು
ಚೆನ್ನಾಗಿ ಒಗ್ಗಿಕೊಂಡಿರುವೆವು..ನಮಗೂ ಗೊತ್ತು ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ ಅಂತ.
ಆದರೇ ಕಾರುವುದು ಇನ್ನೂ ನಿಂತಿಲ್ಲ ..ಈಗ ಅದು ಹೊಸ ಆಯಾಮ ಪಡೆದುಕೊಂಡಿದೆ
ನಮಗೆ ನಮ್ಮ ದನಿ ಕೇಳಿಸಲು ಹೊಸ ಮುಖವಾಡಗಳು ಬಂದಿವೆ...ಅವರನ್ನು ನಾವು ನಮ್ಮನ್ನು
ಉದ್ಧಾರ ಮಾಡಲೆಂದೆ ಬಂದ ಅವತಾರಪುರುಷ ರನ್ನಾಗಿ ನೋಡುತ್ತಿದ್ದೇವೆ..ಜೈಕಾರ ಹೇಳುತ್ತಿದ್ದೇವೆ
ಅವರು ನಮ್ಮ ಸಲುವಾಗಿ ಉಪವಾಸ ಕೂತಿದ್ದಾರೆ.ಮರಗುತ್ತಿದ್ದಾರೆ ಕೂಡ.

ಹೌದು ಅಣ್ಣಾಹಜಾರೆ ಇಂದು ಅನೇಕರ ಕಣ್ಣಲ್ಲಿ ಹಿರೋ. ಗೂಗಲ್ ಕ್ಲಿಕ್ನಲ್ಲಿ ಅವರು ಕತ್ರೀನಾಗಿಂತ
ಹಿಂದಿದ್ದರೂ ಅವರ ಹೆಸರು ಈಗ ಎಲ್ಲರ ನಾಲಿಗೆಮೇಲೆ ಇದೆ.ಸರಕಾರಕ್ಕೂ ನಡುಕವಿದೆ..
ರಾವಲ್ಗಾವ್ ಸಿದ್ದಿಯಿಂದ ದೆಹಲಿವರೆಗೆ ಅಣ್ಣಾ ಪಯಣಿಸಿದ್ದಾಗಿದೆ.ಮೊನ್ನೆ ಸಿಎನೆನ್-ಐಬಿನ್ ಅವರು
ಪ್ರಶಸ್ತಿ ಸಹ ನೀಡಿ ಗೌರವಿಸಿದ್ದಾರೆ. ಜನಲೋಕಪಾಲ್ ದಲ್ಲಿ ತಮ್ಮ ಅಂಶಗಳನ್ನು ಸೇರಿಸಿಕೊಳ್ಳದಿದ್ದಲ್ಲಿ
ಜೇಲ್ ಭರೋ ಸುರುಮಾಡುವುದಾಗಿ ಅವರು ಕರೆ ನೀಡಿದ್ದಾರೆ.ಅವರ ಮಾತಿನಲ್ಲಿ ತೂಕವಿದೆ ಜನ
ಏನೋ ಪವಾಡದ ನಿರೀಕ್ಷೆಯಲ್ಲಿದ್ದಾರೆ.ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ
ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕೆಲವರಾದರೂ ಯೋಚಿಸುತ್ತಿದ್ದಾರೆಯೇ ಅಥವ ಕೆಲ ಬುದ್ಧಿಜೀವಿಗಳು
ಹೇಳುವ ಹ್ಆಗೆ "ಸಮೂಹ ಸನ್ನಿ"ಯ ಪ್ರಭಾವಳಿಯ ಶಿಕಾರಿಯಾಗುತ್ತಿದ್ದೇವೆಯೇ..? ಹೌದು ಈ ಪ್ರಶ್ನೆ
ನನ್ನನ್ನು ಕಾಡುತ್ತಿದೆ. ಈ ಚಳುವಳಿಗಳು ಬೇಕಾಗಿದ್ದವು ಯಾಕ ಅಂದರ ನಾವು ಆರಿಸಿ ಕಳಿಸಿದ, ನಮ್ಮ ನೆಲ
ಜಲ,ಪ್ರಾಣಗಳ ರಕ್ಷಣೆಯ ಜವಾಬ್ದಾರಿ ಹೊತ್ತು ವಿಧಿವಿಧಾನ ತಗೊಂಡ ರಾಜಕಾರಣಿಗಳು ತಮ್ಮ ಹೆಸರಲ್ಲಿ,
ಮಕ್ಕಳ ಹೆಸರಲ್ಲಿ ಆಸ್ತಿ ಮಾಡಕೊಂಡ್ರು..ನಮ್ಮ ದುಡ್ಡಿನ್ಯಾಗ ಮಾರಿಷಸ್ ಗೆ ಕುಟುಂಬ ಸಮೇತ ಪ್ರವಾಸ ಮಾಡಿ
ಬಂದ್ರು ಹಂಗ ಸ್ವಾಮಿಗೋಳಿಗೆ ದಕ್ಷಿಣಿ ಕೊಟ್ಟು ಅಡ್ಡೂ ಬಿದ್ರು..!! ನಮಗ ಇದೆಲ್ಲ ನೋಡಿ ರೋಸಿ ಹೋಗಿತ್ತು.
ಒಂದು ಬದಲಾವಣಿ ಬೇಕಾಗಿತ್ತು.ಇಂಥಾ ಟೈಮದಾಗ ಅಣ್ಣಾ, ರಾಮದೇವ್, ಬೇಡಿ ಇವರು ಅವತಾರ ಪುರುಷರಾಗಿ
ಕಂಡ್ರು. ಅವರ ಹಿಂದ ಹೊರಟೇವಿ ದಡಾ ಮುಟ್ಟತೇವೋ ಇಲ್ಲೋ ಗೊತ್ತಿಲ್ಲ. ಆದ್ರ ಈ ದೋಣಿಯಾನದಾಗ
ನನ್ನಂಥ ಸಿನಿಕರೂ ಸೇರಿಕೊಂಡಾರ. ನನಗ ಹಲವಾರು ಪ್ರಶ್ನೆಗಳಿವೆ..ಉತ್ತರ ಹುಡುಕಿ ಸೋತಿರುವೆ..

೧) ಅಣ್ಣಾ ಚಳುವಳಿಗೆ ಈಗ ವಿರೋಧ ಪಕ್ಷದ ಬೆಂಬಲ ಸಿಕ್ಕಿದೆ. ಭಾಜಪ, ಅಥವಾ ಎಡಪಂಥೀಯರು ತಾವು
ಪ್ರಾಮಾಣಿಕರು..ಎಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲರೇ..? ಅವರು ಆಳಿದ/ಆಳುತ್ತಿರುವ ರಾಜ್ಯದಲ್ಲಿ
ಲಂಚಗುಳಿತನ ಇರಲಿಲ್ಲವೇ,,?ಹಾಗಿದ್ದರೆ ಯಾವ ನೈತಿಕತೆ ಮೇಲೆ ಅವರು ಅಣ್ಣಾ ಜೊತೆ ವೇದಿಕೆ ಹಂಚಿಕೊಂಡ್ರು
ಸ್ವತಃ ಅಣ್ಣಾ ಅವರಿಗೆ ಈ ದ್ವಂದ್ವ ಕಾಡಲಿಲ್ಲವೇ...?
೨) ಅಣ್ಣಾ ಉಪವಾಸ ಮಾಡುತ್ತಾರೆ.ಜನ ಸ್ವಪ್ರೇರಣೆಯಿಂದ ಸೇರುತ್ತಾರೆ. ಹಾಡು,ಭಜನೆ ಇತ್ಯಾದಿ ನಡೆಯುತ್ತವೆ. ಆಣ್ಣಾ
ಕುಳಿತುಕೊಳ್ಳುವ ಪೆಂಡಾಲು, ಜನರ ಉಸ್ತುವಾರಿ ಇವುಗಳಿಗೆಲ್ಲ ದುಡ್ಡು ಬೇಕು. ಆ ದುಡ್ಡು ಬಂದ ಮೂಲಯಾವುದು
ಅದೇನು ಚಂದಾಹಣವೇ ಅಥವಾ ದಾನಿಯೊಬ್ಬ ಕೊಟ್ಟ ಬಳುವಳಿಯೇ , ಒಂದು ವೇಳೆ ದಾನಿ ಕೊಟ್ಟಿದ್ದರೆ ಅವನ
ವಿವರಗಳೇನು ಅಥವ ಆ ದುಡ್ಡು ತೆರಿಗೆ ತಪ್ಪಿಸಿ ಇಲ್ಲಿ ಸುರಿದದ್ದೋ?

ಹೌದು ಮೇಲಿನ ಪ್ರಶ್ನೆ ನೋಡಿ ನನ್ನ ಮೊಸರಿನಲ್ಲಿ ಕಲ್ಲುಹುಡುಕುವ ಚಾಳಿಯವ ಅಂತ ನೀವು ಕರೆಯಬಹುದು.
ಆದರೆ ಒಂದು ಜನಾಂದೋಲನ ಯಶಸ್ಸು ಕಾಣಬೇಕು ಇದು ನನ್ನ ಹಂಬಲ ಕೂಡ ಆದರೆ ಜೊತೆಗೆ ಮೇಲಿನ
ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಇದು ಬಯಕೆ..!

ಭಾನುವಾರ, ಜೂನ್ 19, 2011

ಇದರ ಕತೆ ಇಷ್ಟೇ ಕಣಪ್ಪೋ....

ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ
ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು
ಅವರ ಪಂಥಾಹ್ವಾನ ಸ್ವೀಕರಿಸಿ ಧರ್ಮಸ್ಥಳದಲ್ಲಿ ಒಂದುದಿನ ಮೊದಲೇ ಹೋಗಿ
ತಯಾರಿಯಲ್ಲಿರುತ್ತಾರಂತೆ. ಈ ಬಿಜೆಪಿ ಸರಕಾರ ಏಳುತ್ತ ಬೀಳುತ್ತ ಮೂರು ವರ್ಷ
ಕಳೆದಿದೆ. ಈಗ ಮಾಜಿ ಸಿಎಮ್ಮು ಈಗಿನ ಸಿಎಮ್ಮ ಬಗ್ಗೆ ಮೂರುವರ್ಷದಲ್ಲಿ ಮುನ್ನೂರು
ಬಾರಿ ಅಪವಾದ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಹಾಲಿ ನಮ್ಮ ಸಿಎಮ್ಮು
ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಮಾಜಿ ವಿರುಧ್ದ
ಅನೇಕ ದಾಖಲೆ ಬಿಡುಗಡೆ ಮಾಡಿದಾರೆ. ಒಟ್ಟಿನಲ್ಲಿ ಈ ಮೂರುವರ್ಷದಲ್ಲಿ ನಾಡಿನ
ಜನತೆಗೆ ಭರಪೂರ್ ಮನರಂಜನೆ ಕೊಟ್ಟಿದ್ದಾರೆ. ಈಗ ಕ್ಲೈಮಾಕ್ಸ್ ಹೊತ್ತು .
ಇಲ್ಲಿ ನಾಯಕರೂ ಇಲ್ಲ ಖಳರೂ ಇಲ್ಲ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಯುಧಗಳಿಗೆ
ಅವಕಾಶ ಇಲ್ಲ. ಹೀಗಾಗಿ ಅಲ್ಲಿ ರಕ್ತಪಾತಕೆ ಆಸ್ಪದವಿಲ್ಲ. ಆದರೆ ದೇವರ ಸನ್ನಿಧಿಯಲ್ಲಿ
ಸುಳ್ಳು ಹೇಳಿದರೆ/ಸುಳ್ಳು ಆಣೆ ಹಾಕಿದವ ರಕ್ತ ಕಾರಿಕೊಂಡು ಸಾಯುತ್ತಾನೆ ಅಂತ ಪ್ರತೀತಿ.
ಈಗ ಈ ಹಾಲಿ ಅಥವಾ ಮಾಜಿ ಇಬ್ಬರಲ್ಲಿ ಒಬ್ಬರು ರಕ್ತಕಾರುವುದಂತೂ ನಿಕ್ಕಿ.ನನಗೆ
ಕುತೂಹಲ ಇರೋದು ಆ ರಕ್ತದ ಬಣ್ಣದ ಬಗ್ಗೆ...! ನಂಜು ನುಂಗಿ ಅದ ಉಗುಳಿದವರ ರಕ್ತ
ಕೆಂಪಗಿರಲು ಹೇಗೆ ಸಾಧ್ಯ??
ಯಾಕೆ ಹೀಗಾಗುತ್ತಿದೆ ಅಂತ ಯಾವುದೇ ಶ್ರೀ ಸಾಮಾನ್ಯ ತಲೆ ಕೆಡಿಸಿಕೊಳ್ಳುತ್ತಿಲ್ಲ
ತನ್ನ ಸುತ್ತಲಿನ ತನ್ನ ಕವಿದಿರುವ ಸಮಸ್ಯೆಗಳ ಬೆಂಕಿಗೆ ಅವ ಮೈಯೊಡ್ಡಿ ಹಿತ ಅನುಭವಿಸುತ್ತಿದ್ದಾನೆ
ಆದರೆ ಮೀಡಿಯಾದವರ ಹೊಟ್ಟೆ ಹಸಿವು ಅಗಾಧ ಹಿತ ಅನುಭವಿಸಲು ಬಿಟ್ಟರೆ ಅವರು ಉಸಿರಾಡುವುದು
ಹೇಗೆ ಅದಕ್ಕೇ ಅವರು ಅವನನ್ನು ತಿವಿದು ಎಚ್ಚರಿಸಿ ೨೭/೦೬/೨೦೧೧ ರಂದು ನಡೆಯಲಿರುವ ಆಣೆಪ್ರಕರಣ
ದ ಬಗ್ಗೆ ಅಭಿಪ್ರಾಯ ಹೇಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಲಿ ಮಾಜಿ ಕದನ ಇತಿಹಾಸದಲ್ಲಿ
ಮೊದಲ ಬಾರಿ ಆಗುತ್ತಿರುವುದು ಹೀಗಾಗಿ ಇದನ್ನು ಕವರ್ ಮಾಡಲು ಪುಡಿಹುಡಿ ಚಾನಲ್ ಗಳಲ್ಲದೇ
ಫಾಕ್ಸ್, ಸಿಎನ್ ಎನ್ ಹಾಗೂ ಬಿಬಿಸಿ ಯವರು ಬರಲಿದ್ದಾರೆ. ಈಗಾಗಲೇ ಧರ್ಮಸ್ಥಳದ ಲಾಜ್ ಎಲ್ಲ
ಬುಕ್ ಆಗಿವೆ. ಇದೇ ಸಂಧರ್ಭ ಲಾಭಮಾಡಿಕೊಳ್ಳಲು ಶ್ರೀ ಕ್ಷೇತ್ರದ ಸುತ್ತಲಿನ ಯಾತ್ರಾಸ್ಥಳದವರೂ
ತಮ್ಮ ತಮ್ಮ ದೇವರ ದರ್ಶನ ದ ರೇಟು ಕಮ್ಮಿ ಮಾಡಿಕೊಂಡು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ೨೭/೦೬/೧೧ ರಂದು ನಡೆಯಲಿರುವ ಐತಿಹಾಸಿಕ ದಿನದ ಪೂರ್ವ ಮಾಹಿತಿ ಎಲ್ಲರಿಗಿಂತ
ಮೊದಲೇ ಎಕ್ಸಕ್ಲೂಸಿವ್ ಆಗಿ ನೀಡಿದ ಈ ಬ್ಲಾಗಿನ ಟಿಆರ್ ಪಿ ಹೆಚ್ಚಿಗೆಯಾಗಲಿದೆ.ಇದು ಸತ್ಯ ಈ

ಬಗ್ಗೆ ನಾನೂ ಬೇಕಾದರೆ ಆಣೆ ಮಾಡಿ ನಿರೂಪಿಸಿಯೇನು.....!!!

ಶುಕ್ರವಾರ, ಮೇ 6, 2011

ಅಂಕಿತಾರಾಣೆ--ಪಾನಿಪುರಿ ಪುರಾಣ..!


ನೀವು ಪಾನಿಪೂರಿ ಪ್ರಿಯರೇ? ಹಾಗಿದ್ದರೆ ಇದನ್ನು ತಪ್ಪದೇ ಓದಿ...!
ಹೌದು ಇದೊಂಥರಾ ವಿಚಿತ್ರ ಟೈಟಲ್ಲು. ಹತ್ತು ನಿಮಿಷದ ತನ್ನ ಬೊಗಳೆಯಲ್ಲಿ
ರಾಜಪುರೋಹಿತ್ ಎಂಬ ವ್ಯಕ್ತಿ ಸ್ವತಃ ಕೆಡುವುದಲ್ಲದೆ ತನ್ನ ಪಾರ್ಟಿ ಬಿಜೆಪಿಯ
ವರ್ಚಸ್ಸನ್ನೂ ಹಾಳುಗೆಡವಿದ. ಅಂಕಿತಾ ಅವಳ ವ್ಯಕ್ತಿತ್ವ ಅವಳ ಚಾರಿತ್ರ್ಶವಧೆ
ಮಾಡುವ ಮಾತು ಆಡಿದ ರಾಜಪುರೋಹಿತ ಈಗ ಅವಳ ಕ್ಷಮೆ ಕೇಳಿದ.
ನಮ್ಮಲ್ಲಿ ಒಂದು ಗಾದೆ ಇದೆ "ಗೋಡೆಯಲ್ಲಿರುವ ಮೊಳೆ ತಗೊಂಡು....ದಲ್ಲಿ
ಚುಚ್ಚಿಕೊಂಡ" ಅಂತ. ಈ ಗಾದೆ ರಾಜಪುರೋಹಿತ ಸಾಹೇಬಗೆ ಅಕ್ಷರಶಃ
ಅನ್ವಯವಾಗುತ್ತದೆ.
ಅಂಕಿತಾ ಮಾಡಿದ್ದು ಏನು. ತಾ ವಾಸಿಸುತ್ತಿರುವ ಬಿಲ್ಡಿಂಗಿನ ಹೊರಗೆ ಇರುವ
ಪಾನಿಪುರಿ ಅಂಗಡಿಯವ ಹಾಡುಹಗಲಲ್ಲಿ ತನ್ನ ಗಾಡಿಯ ಕೆಳಗಡೆ ಶೆಲ್ಫನಲ್ಲಿಟ್ಟ
ಜಗ್ ನಲ್ಲಿ ಮೂತ್ರಹೊಯ್ಯುವುದನ್ನು ಅವಳು ಮೊಬೈಲಿನಲ್ಲಿ ಸೆರೆಹಿಡಿದಳು.
ಪಾನಿಪುರಿ ಅದನ್ನು ತಿಂದು ಆಗಬಹುದಾದ ಅಪಾಯಗಳನ್ನು ಪುಷ್ಟೀಕರಿಸಲು
ತಾ ತೆಗೆದ ವಿಡಿಯೋ ಸಹಾಯಆಗಬಹುದು ಇದು ಅವಳ ಹವಣಿಕೆ. ಅದೇ ಹಂಬಲ
ದಲ್ಲಿ ಅವಳು ವಿಡಿಯೋ ನೆಟನಲ್ಲಿ ಹರಿಬಿಟ್ಟಳು. ಈ ಶೂಟಿಂಗ್ ಪ್ರಕರಣದ
ಎರಡು ಮೂರುದಿನ ಮೊದಲು ರಾಜ್ ಠಾಕ್ರೆಯ ಪಾರ್ಟಿಯವರು ಮುಂಬೈಯ
ಭೇಲಪುರಿ,ಪಾನಿಪುರಿ ಅಂಗಡಿ ಹಾಗೂ ಅವನ್ನು ನಡೆಸಿಕೊಂಡು ಬರುತ್ತಿರುವ
ಅನಿವಾಸಿ ಮುಂಬೈಕರ್ ಮೇಲೆ ದಾಳಿ ನಡೆಸಿದ್ದರು. ವಿಡಿಯೋ ನೋಡಿ
ರಾಜಪುರೋಹಿತ ಆಡಿದ ಮಾತು ಅವರನ್ನು ಕೆರಳಿಸಿತು. ಪೋಲಿಸ್ ಠಾಣೆಯಲ್ಲಿ
ಅಂಕಿತ ದೂರು ದಾಖಲಿಸುವಾಗ ಅವಳ ಬೆಂಗಾವಲಾಗಿ ಮನಸೇ ಜನ ಇತ್ತು.
ಅಂಕಿತಾ ವಿಡಿಯೋಕ್ಕೆ ಈಗ ರಾಜಕೀಯ ಡಿಮಾಂಡು. ನಮ್ಮ ದೇಶದಲ್ಲಿ ಏನೇ
ಘಟನೆಯೂ ರಾಜಕೀಯಬಣ್ಣ ಬಳಿದುಕೊಳ್ಳುತ್ತೆ ಅನ್ನುವುದು ಮೇಲಿನ ಸಂಗತಿಯಿಂದ
ಮತ್ತೆ ಸಾಬೀತಾಗಿದೆ.
ಅನೇಕ ಪ್ರಶ್ನೆಗಳಿವೆ..
ರಾಜಪುರೋಹಿತ್ ಆಡಿದ್ದು ಸರೀನಾ ? ಅವಳು ಆ ರೀತಿ ವಿಡಿಯೋ ತೆಗೆದಳು ಅಂದ
ಮಾತ್ರಕ್ಕೆ ಅವಳು ಕೆಟ್ಟನಡತೆಯವಳು ಅಂತ ಸರ್ಟಿಫಿಕೀಟು ಕೊಡೋದು ಸರೀನಾ?
ಅಂಕಿತ ಯಾಕೆ ರಾಜಕೀಯದಾಳ ಆದಳು. ಪ್ರಸಿದ್ಧಿ ಸುಲಭವಾಗಿ ಸಿಕ್ಕಾಗ ಆದರ್ಶ
ಮಾಯವಾಗೋದ್ಯಾಕೆ?
ನಾವಿ ಇದೆಲ್ಲ ನೋಡಿಯೂ ಓದಿಯೂ ಮತ್ತೆ ಸಾಯಂಕಾಲ ಪಾನಿಪುರಿ ತಿನ್ನುವುದೇಕೆ?
ಉತ್ತರ ಬಲ್ಲವರು ಹೇಳರಿ.

ಸೋಮವಾರ, ಏಪ್ರಿಲ್ 4, 2011

ಅಫ್ರಿದಿಯ ಬೊಗಳುವಿಕೆ ಹಾಗೂ ನಮ್ಮ ತಿಕ್ಕಲುತನಗಳು..

"ಸಮಾ" ಎನ್ನುವ ನ್ಯೂಸ್ ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅಫ್ರಿದಿ ಅಂದ---
""In my opinion, if I have to tell the truth, they (Indians) will never have hearts like Muslims and Pakistanis. I don't think they have the large and clean hearts that Allah has given us,"

ಅವನ ಮಾತುಗಳಲ್ಲಿ ಸತ್ಯಇದೆಯೋ ಇಲ್ಲವೋ ಇಲ್ಲಿರುವ ಮುಸ್ಲಿಮ್ ರು ಹೇಳಬೇಕು. ಇದು ಸೋತವನ ಹತಾಶ
ನುಡಿಯೋ ಅಥವಾ ಮನದಲ್ಲಿ ಮಥಿಸಿಮಥಿಸಿ ಕಾರಿದ ವಿಷವೋ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದಾನೆ. ಅಲ್ಲಾಹು ಕೊಟ್ಟ ದೇಣಿಗೆ ಹೃದಯ ಅದು ಭಾರತೀಯರಲ್ಲಿಲ್ಲ ಇದು ಅವನ ಅಂಬೋಣ.
ಈ ಮಾತಿಗೆ ಆಗಲೇ ಅಲ್ಲಿಯ ಬೋರ್ಡು ಪ್ರತಿಕ್ರಿಯಿಸಿದೆ.ಅದು ಅವನ ವ್ಯಕ್ತಿಗತ ಪ್ರತಿಕ್ರಿಯೆ ಎಂದು ತಿಪ್ಪೆ ಸಾರಿಸಿದೆ.
 ಇಲ್ಲಿಯ ಮುಸ್ಲಿಂ ಬೋರ್ಡು ಅದನ್ನು ಖಂಡಿಸಿದೆ. ಅದು ತಿಕ್ಕಲುತನ ಎಂದಿದೆ. ಆದರೆ ಒಳಗೆಲ್ಲೋ ಅವ ನಿಜ ಹೇಳುತ್ತಿರಬಹುದು ಎಂಬ ಒಂದು ಖುಷಿಯ ಅಲೆ ಮನದಲ್ಲಿ ಮೂಡಿರಲು ಸಾಕು.
 ಇರಬಹುದೇನೋ ಅವರಿಗೆ ಅತೃಪ್ತಿ ಅದು ಒಂಥರಾ ರೋಗ.
ಸವಲತ್ತುಗಳು ,ರಿಷುವತ್ತುಗಳು ಸಿಕ್ಕಷ್ಟು ಈ ರೋಗ ಉಲ್ಬಣಿಸುತ್ತದೆ.

ಈಗ ಅಫ್ರಿದಿ ಯ ಮಾತು ಆ ದೇಶದ ಈಗಿನ ನಿಲುವನ್ನು ಬಿಂಬಿಸುತ್ತವೆಯೇ ಅಥವಾ ಅದು ಹುಚ್ಚು ನಾಯಿಯ ಬೊಗಳುವಿಕೆಯೇ .ಅಫ್ರಿದಿ ಆ ದೇಶದ ಕ್ರಿಕೆಟ್ ತಂಡ ಮುನ್ನಡೆಸಿದವ. ಒಂದು ರೀತಿಯಲ್ಲಿ ಪ್ರತಿನಿಧಿ ಅವ.
ಹೀಗಿರುವಾಗ ಅವನ ಪ್ರಲಾಪ ಕೇವಲ ವೈಯುಕ್ತಿಕ ಅದು ಪಾಕ್ ಅಥವಾ ಒಟ್ಟಾರೇ ಮುಸಲ್ಮಾನರ ನಿಲುವು ಆಗಲು
ಸಾಧ್ಯನೇ ಇಲ್ಲ ಹೀಗೊಂದು ವಾದ ಏಳಬಹುದು. ಈ ವಾದ ನಾ ಒಪ್ಪುತ್ತೇನೆ ಆದರೆ ಹುಚ್ಚುನಾಯಿಗೆ ಕಲ್ಲೆಸೆಯಬೇಕು
ಹೊರತು ರೊಟ್ಟಿ ನೀಡಬಾರದು. ಆ ದೇಶದ ಪ್ರಧಾನಿಯಾಗಲಿ. ನಾಯಕರಾಗಲಿ ಅವನ ಮಾತು ಖಂಡಿಸಲೇ ಇಲ್ಲ.
ಅವ ನಿಜಾನೇ ಹೇಳುತ್ತಿರುವುದು ಎಂದು "ಆಫ್ ದಿ ರಿಕಾರ್ಡ" ಹೇಳುತ್ತಿರಬಹುದು. ಪಾಕಿಸ್ತಾನ ಯಾವಾಗಿದ್ದರೂ
ನಮಗೆ ಮಗ್ಗುಲ ಮುಳ್ಳು. ಆಗಾಗ ಚುಚ್ಚುತ್ತದೆ. ಇದು ನಿಜ.

ನಮ್ಮ ರಾಜತಾಂತ್ರಿಕತೆ ಇಷ್ಟು ಕೆಳಮಟ್ಟ ಕಂಡಿತೇಕೆ ಗೊತ್ತಾಗುತ್ತಿಲ್ಲ. ಮ್ಯಾಚಿನ ನೆವ ಮಾಡಿ ಗಿಲಾನಿಯನ್ನು
ಆಹ್ವಾನಿಸಿ ಅವನಿಗೆ ಉಣಬಡಿಸಿದೆವು. ಹೊಸ ಹೆಜ್ಜೆ ಎಂದು ಕೇಂದ್ರ ಸರಕಾರ ಹೇಳಿಕೊಂಡೀತು. ಯಾವಾಗಾವಾಗ
ನಾವು ಅವರೆಡೆಗೆ ಕೈ ಚಾಚಿದಾಗ ನಮಗೆ ಸಿಕ್ಕಿದ್ದು ಕಾರ್ಗಿಲ್,೨೬/೧೧ ಈಗ ಅಫ್ರಿದಿಯ ಈ ಮಾತುಗಳು.
ಮೀಡಿಯಾದ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ಈ ತಂತ್ರ ಹೂಡಿದರು ಅನಿಸುತ್ತದೆ. ಆದರೆ ಅದು ತಿರುಗುಬಾಣವಾಗಿದೆ ಅಫ್ರಿದಿಯ ಈ ಮಾತಿನಲ್ಲಿ. ಗಿಲಾನಿ ಬಂದ ಕೈ ಕುಲುಕಿದ ಪೊಗದಸ್ತಾಗಿ ಉಂಡ ಅಲ್ಲಿ ಹೋದ
ಎಲ್ಲ ಮರೆತ. ಇದು ಕೇಂದ್ರದ ಕಣ್ಣು ತೆರೆಸಿತೆ ನೋಡಬೇಕು.

ಅಫ್ರಿದಿಯ ಮಾತು ನನ್ನ ಅನಿಸಿಕೆ ಬಜ್ ನಲ್ಲಿ ಹಾಕಿದ್ದೆ. ಅನೇಕ ಜನ ಪ್ರತಿಕ್ರಿಯಿಸಿದರು. ಆಜಾದ್ ಭಾಯಿ ನಾ ಅವರಿಗೆ
ನೋವುಂಟು ಮಾಡಿದೆ ಎಂದು ಗೂಬೆ ಕೂರಿಸಿದರು. ಆದರೆ ಸತ್ಯ ಏನು ಅವರಿಗೂ ಗೊತ್ತು. ಅದನ್ನು ಒಪ್ಪಿಕೊಳ್ಳುವ
ಅಫ್ರಿದಿಯ ಮಾತು ನಮ್ಮ ಸಮುದಾಯದ್ದಲ್ಲ ಅಂತ ಹೇಳಬೇಕಾಗಿತ್ತು. ಮಾತು ಮರೆಸಿ ಅದೇ ಊಟ, ವಿನೋದ ಹೀಗೆ
ಮಾತು ಬದಲಿಸಿದರು. ಹೇಳುವುದಿಷ್ಟೇ  ಅಫ್ರಿದಿಯ ಮಾತು ವೈಯುಕ್ತಿಕ ಆಗೊಲ್ಲ ಅವನಿಗೆ ಅಲ್ಲಿ ಬೆಂಬಲವಿದೆ ಅವನ
ನಿಲುವು ಅಲ್ಲಿಯ ಜನರ ಭಾವನೆ ಬಿಂಬಿಸುತ್ತದೆ. ಇಂಥಾ ದೇಶದ ಜೊತೆ ಮತ್ತೆ ಮಾತು ಆಡುವ ಹುಂಬತನ ನಮಗೆ
ಬೇಡ ಅಲ್ಲವೇ....!

ಭಾನುವಾರ, ಏಪ್ರಿಲ್ 3, 2011

ಗೋಲ್ ಕೀಪರ್ ನಿಂದ ವಿಶ್ವಕಪ್ ವರೆಗೆ...ಹೌದು ಅವ ಮೊದಲು ಗೋಲ್ ಕೀಪರ್ . ಹಿಂದುಳಿದ ಜಾರ್ಖಂಡ್ ನಿಂದ ಬಂದವ ಇಂದು ಕೋಟಿ ಕೋಟಿ ಭಾರತೀಯರ ಆರಾಧ್ಯ ದೈವ.
ಬಹುಶಃ ಸಚಿನ್ ಬಿಟ್ಟರೆ ಜಾಹೀರಾತಿನಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುವ ವ್ಯಕ್ತಿ ಅವ. ಅದೊ ಮೊಬೈಲ್ ನಿಂದ ಹಿಡಿದು ಸೀಲಿಂಗ್ ಫ್ಯಾನ್
ಜಾಹೀರಾತಾಗಿರಬಹುದು ಅಲ್ಲಿ ಅವ ಹಾಜರ್ರು. ನಿನ್ನೆ ನಡೆದ ಫೈನಲ್ ಅವನ ಉತ್ತುಂಗದ ಸೀಮೆ ಅಥವಾ ಇಂತಹ ಸೀಮೆಗಳೆ
ಉಲ್ಲಂಘನೆ ಮೇಲಿಂದ ಮೇಲೆ ಆಗುತ್ತಲೇ ಇರುತ್ತದೆ. ಅವನ ಹೆಸರು ಮಹೇಂದ್ರ ಸಿಂಗ್ ಧೋನಿ.
೨೦೦೩ರಲ್ಲಿ ಮುಂಬೈಯಲ್ಲಿ ಒಂದು ಸಾದಾ ಮ್ಯಾಚು ನಡೆದಿತ್ತು. ಭುಜದವರೆಗೆ ಕೂದಲಿದ್ದ ಒಬ್ಬ ಯುವಕ ಬಾರಿಸಿದ ಸಿಕ್ಸರ್ ಮೈದಾನದ
ಆಚೆ ಇರೋ ಗರವಾರೆ ಕ್ಲಬ್ ನ ಗಾಜು ಒಡೆದಿತ್ತು. ನೋಡಿದವರು ಬೆರಗಾಗೋ ವಿಭಿನ್ನ ವಿಚಿತ್ರ ಬ್ಯಾಟಿಂಗು. ಅವನ ಶೈಲಿ, ಧಿಮಾಕು
ಎಲ್ಲರ ಗಮನಸೆಳೆದಿತ್ತು. ಗೋಲಕೀಪರ್ ಆದ ಅನುಭವ ಬೇರೆ ಸಹಜವಾಗಿ ವಿಕೆಟ್ ಕೀಪರ್ ಆದ. ಆಕ್ರಮಣ ಅವನ ಅಸ್ತ್ರ.
ಆ ಅಸ್ತ್ರ ಬಳಕೆಯಾಗಿದ್ದು ಲಂಕಾ ವಿರುದ್ಧ ೧೮೩ ರನ್ ಚಚ್ಚಿದಾಗ. ಕ್ರಿಕೆಟ್ ಪಂಡಿತರು ಬೆರಗಾದರು ತಲೆದೂಗಿದರು. ಮಹೇಂದ್ರ ಧೋನಿ
ಮಾಹಿ ಯಾಗಿ ಹೆಸರುಗಳಿಸಿದ್ದು ಪಾಕ್ ಪ್ರವಾಸದಲ್ಲಿ. ಸ್ವತಃ ಮುಶ್ರಫ್ ಅವನ ಆಟ್ ಹಾಗೂ ಚಿಮ್ಮುವ ಕೂದಲಿಗೆ ಮೆಚ್ಚಿಗೆ ಸೂಸಿದ.
ಮಾಹಿಯ ಆಟ ಕುಸಿದಿದ್ದು ನಂತರ ಚೇತರಿಸಿಕೊಂಡಿದ್ದೂ ಇದೆ. ೨೦೦೭ ರ ವಿಶ್ವಕಪ್ ಸೋಲು ಹೊಸ ನಾಯಕನ ಹುಡುಕಾಟದಲ್ಲಿದ್ದಾಗ
ಕಂಡಿದ್ದು ಇವ.೨೦-೨೦ವಿಶ್ವಕಪ್ ನಾಯಕತ್ವ. ತರುಣರ ಪಡೆ ಕಟ್ಟಿಕೊಂಡು ಹೋರಾಡಿದ. ಪಾಕ್ ವಿರುದ್ಧ ಗೆಲುವು ಸಾಧಿಸಿ ಕಪ್ ಎತ್ತಿ
ಹಿಡಿದ. ೨೦೦೮ರ ಆಸಿಸ್ ವಿರುದ್ಧ ಒನ್ ಡೇ ಗಳಿಗೆ ನಾಯಕನಾದ. ನಾಯಕತ್ವದಲ್ಲಿ ಅನೇಕ ಜಯ ಮೂರು ಫೈನಲ್ ಪಂದ್ಯಗಳಲ್ಲಿ
ಎರಡನ್ನು ಗೆದ್ದು ಆ ನೆಲದಲ್ಲಿ ಗೆಲುವು ಸಾಧಿಸಿದ ಮೊದಲಿಗನಾಗಿ ಮೆರೆದ. ಇದಾದ ನಂತರ ಟೆಸ್ಟ್ ಟೀಮ್ ನಾಯಕತ್ವ. ಕೀಪಿಂಗ್ ಮಾಡುತ್ತ
ಬ್ಯಾಟ್ ಬೀಸುತ್ತ ಯೋಜನೆಗಳ ರೂಪಿಸುತ್ತ ಹೀಗೆ ಧೋನಿ ಸದಾಕಾಲ ಬಿಸಿ ಮನುಷ್ಯ.
ಈ ಮೊದಲಿನ ನಾಯಕ ಗಂಗೂಲಿ ಟೀಮನಲ್ಲಿ ಬೇಡ ಎಂದಾಗ ದೊಡ್ಡ ಗದ್ದಲವಾಗಿತ್ತು. ದಾದಾನ ದಾದಾಗಿರಿ ಮುಗಿಯಲು ಧೋನಿಯ
ನಿಲುವು ಕಾರಣ. ಈಗಲೂ ಹಿರಿಯರಾದ ಸಚಿನ್,ದ್ರಾವಿಡ್ ಮತ್ತು ವಿವಿಎಸ್ ತಂಡದಲ್ಲಿದ್ದಾರೆ. ಅವರ ಪಾಂಡಿತ್ಯಕ್ಕೆ ಅವ ಗೌರವಾನೂ ಕೊಟ್ಟಿದ್ದಾನೆ
ಹಾಗೆಯೇ ನಿರ್ಣಯ ಮಾತ್ರ ತನ್ನಬಳಿ ಇಟ್ಟುಕೊಂಡಿದ್ದಾನೆ. ಮಾಹಿಯ ನಿರ್ಣಯಗಳು instinct ಮೇಲೆ ಆಧಾರಿತ. ಅನೇಕ ಉದಾಹರಣೆಗಳಿವೆ
ಹಲವಾರು ಸಾರಿ ಅವು ಉಲ್ಟಾ ಆಗಿವೆ. ಆದರೆ ಧೋನಿ ಹಿಂದೆ ಸರಿದಿಲ್ಲ. ಈಗಂತೂ ಅವ ವಿಶ್ವ ವಿಜೇತ, ಮುಂದೆ ಇನ್ನೂ ಸಾಗಬೇಕಾಗಿದೆ
ಧೋನಿ ನಿಲ್ಲುವ ಆಸಾಮಿಯಂತೂ ಖಂಡಿತ ಅಲ್ಲ.

ಶನಿವಾರ, ಮಾರ್ಚ್ 5, 2011

ಕನ್ನಡವೆನೆ ಎನ್ನೆದೆ...

ಇತ್ತೀಚೆಗಿನ ಎರಡು ಸಂಗತಿಗಳು ನಮ್ಮ ಕನ್ನಡ ನುಡಿ ಈ ರಾಜ್ಯದ ಘನತೆ ಬಗ್ಗೆ ಹತ್ತು ಹಲವು ವಿಚಾರಗಳ ಚರ್ಚೆಗೆ ವೇದಿಕೆಯಾಗಿವೆ.
ಅದು ಹೇಮಾಮಾಲಿನಿ ನಮ್ಮ ರಾಜ್ಯದಿಂದ ಆರಿಸಿ ಬಂದಿದ್ದಿರಬಹುದು ಅಥವಾ ಬೆಳಗಾವಿಯಲ್ಲಿ ನಾರಾಯಣ ಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿರುವುದು.
ಇವೇ ಆ ಎರಡು ವಿದ್ಯಮಾನಗಳು. ಪತ್ರಿಕೆಯಲ್ಲಿ ಮಾತ್ರವಲ್ಲದೇ ನೆಟ್ ಲೋಕದಲ್ಲು ಚರ್ಚೆಗೆ ಗ್ರಾಸವಾಗಿತ್ತು. ಇದು ಒಳ್ಳೆಯ ಬೆಳವಣಿಗೆ. ಚರ್ಚೆ ಯಾವಾಗಲೂ ಭಿನ್ನ ದನಿ
ಗಳನ್ನು ಕೇಳಿಸುತ್ತದೆ. ಮತ್ತು ಭಿನ್ನ ಸ್ವರ ಕೇಳಿಸುತ್ತದೆ..ಆದರೆ ಪೂರ್ವಾಗ್ರಹ ಪೀಡಿತ ಕಿವಿಗಳಿಗೆ ಭಿನ್ನ ರಾಗ ಬೇಕಾಗಿಲ್ಲ.ಫೇಸ್ ಬುಕ್ ನಲ್ಲಿ ನಾ ಹಾಕಿದ ಕಾಮೆಂಟಿಗೆ
ಉತ್ತರವಾಗಿ ನನ್ನ ಮಾತೃಭಾಷೆ ಯಾವುದೆಂದು ಪ್ರಶ್ನಿಸಲಾಯಿತು. ನಾ ಅದಕ್ಕೆ ಸರಿಯಾದ ಉತ್ತರ ಕೊಟ್ಟೆ. ಸ್ನೇಹಿತ ರೋರ್ವರು ಬರೆಯುತ್ತ ವಿಶ್ವಕನ್ನಡ ಸಮ್ಮೇಳನ
ಮಲ್ಯ ಅವರು ಉದ್ಘಾಟಿಸಲಿ ಎಂದು ಕುಹಕವಾಡಿದರು. ಈಗ ಮೂರ್ತಿ ಅವರಿಗೂ ಇರಿಸುಮುರಿಸಾಗಿ ನಮ್ಮ ಮುಖ್ಯಮಂತ್ರಿ ಜೊತೆ ನಕಾರ ಸೂಚಿಸಿದ್ದರೂ ತಮ್ಮ ಮೂಗು
ಎಲ್ಲಿ ಮಣ್ಣಾಗುತ್ತದೆ ಎಂಬ ಹೆದರಿಕೆ ಸರಕಾರಕ್ಕೂ ಬಂದು ಶತಾಯ ಗತಾಯ ಮೂರ್ತಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ ಅಂತ ಹೇಳಿಕೆ ಬಂದಿದೆ.
ಇರಲಿ ನನ್ನದೊಂದು ಮೂಲಪ್ರಶ್ನೆ ಇದೆ. ಈ ಸಮ್ಮೇಳನ ಯಾಕೆ ನಾವು ಕನ್ನಡದವರು ವಿಶ್ವದಾದ್ಯಂತ ಕನ್ನಡ ಪ್ರೇಮಿಗಳಿದ್ದಾರೆ ಅವರು ಒಂದೆಡೆ ಸೇರಿ ಉತ್ಸವ
ಆಚರಿಸುತ್ತಾರೆ. ನಿಜ ಅದರಿಂದ ಏನು ಸಾಧಿಸುವೆವು ನಾವು ಉತ್ತರ ಗೊತ್ತಿದ್ದೆ. ಶೂನ್ಯ. ಕನ್ನಡತನ ನಿಧಾನವಾಗಿ ನಶಿಸಿಹೋಗಿದೆ. ನಾ ಬೆಂಗಳೂರಲ್ಲಿ ಇದ್ದು
ನಾಲ್ಕು ವರ್ಷ ಮುಗಿದಿವೆ. ದಿನೇ ದಿನೇ ಕನ್ನಡ ಸಾಯುವುದನ್ನೇ ನೋಡುತ್ತಿರುವೆ. ಬೆಂಗಳೂರಿನಲ್ಲಿ ಪ್ರತಿಶತ ೩೨ ಮಾತ್ರ ಕನ್ನಡಿಗರಿದ್ದಾರೆ ಅಂತ ಸರ್ವೆ ಹೇಳುತ್ತದೆ.
ಇಲ್ಲಿ ಜನ ಈ ಮೊದಲು ತಮಿಳರನ್ನು, ಮಲೆಯಾಳಿಗರನ್ನು ಕೈ ಬೀಸಿ ಕರೆದರು ಇಲ್ಲಿಯ ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗರನ್ನು ಹಿಂದಿಕ್ಕಿ ಅವರು ಮೆರೆದಾಗ ಹಲ್ಕಿರಿದು
ಅವರ ಬಾಲಬಡಿದರು. ಈಗ ಐಟಿ ಬಿಟಿಗಳಲ್ಲೂ ಅದೇ ಹಾಡು. ಕನ್ನಡಿಗರು ಮರೆಯಾಗಿದ್ದಾರೆ ಮೂರ್ತಿ ಮುಂತಾದವರು ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ ಅಂತ ಬೊಬ್ಬೆ
ಹೊಡೆಯುವುದೇಕೆ..ಬಹುತೇಕ ಐಟಿ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿರುವವರು ಕನ್ನಡೇತರರು. ಹೀಗಾಗಿ ಸಹಜವಾಗಿಯೇ ಸ್ವಭಾಷಾ ಉದಾರತೆ
ಇರುತ್ತದೆ. ಇನ್ನು ಇದಕ್ಕೆ ನಾವು ಅಂದರೆ ಕನ್ನಡಿಗರು ಕಾರಣಕರ್ತರು. ಇತರೆ ರಾಜ್ಯದವರಹಾಗೆ ನಾವು ಕೆಲಸ ಮಾಡಲಾರೆವು. ನಮ್ಮಲ್ಲಿ dignity of labour ಇದೆ.
ಬಿಎಮಟಿಸಿ ಯಲ್ಲಿ ಕೆಲಸಕ್ಕಿರುವ ಚಾಲಕ ನಿರ್ವಾಹಕ ರಲ್ಲಿ ಬಹುಪಾಲು ಜನ ಬೆಂಗಳೂರು ಹೊರಗಿನವರೇ...! ಹೋಗಲಿ ಬಡಾವಣೆಯ ಹೆಸರಾಗಲಿ ,ಸ್ಟಾಪ್ ಆಗಲಿ
ಕನ್ನಡ ದಲ್ಲಿವೇಯೇ..ಕೆಂಬನಿ ಅಂದರೆ ಇಲ್ಲಿ ಯಾರಿಗೂ ಗೊತ್ತೇ ಆಗೂದಿಲ್ಲ ಅದೇ ಮೆಜೆಸ್ಟಿಕ್ ಅಂದರೆ ಬಲ್ಬು ಹೊತ್ತಿಕೊಳ್ಳುತ್ತೆ. ಇನ್ನೆಷ್ಟು ದಿನ ನಾವು ಈ ವೈಯಾಲಿ ಕಾವಲ್,
ಕೆ ಆರ್ ಪುರಂ, ಮಲ್ಲೇಶ್ವರಂ , ಫೋರ್ತ್ ಬ್ಲಾಕ್, ನಾರ್ತ್ ರೋಡ್ ಅಂತ ಹೇಳಬೇಕೋ ಗೊತ್ತಿಲ್ಲ. ಮದ್ರಾಸು ಚೆನ್ನೈ ಆಗಿ ಬಹಳೇ ದಿನ ಆದ್ವು. ಬ್ಯಾಂಗಲೋರ್ ಇನ್ನೂ
ಬೆಂಗಳೂರು ಆಗಿಲ್ಲ. ನಮ್ಮ ಪೀಳಿಗೆಗೆ ಆ ದಿನ ನೋಡುವ ಭಾಗ್ಯವೂ ಇರಲಿಕ್ಕಿಲ್ಲ.
ಹಳೇ ಮೈಸೂರು ಕಡೆ ಜನ ರಾಜಕೀಯ ಮಾಡಿ ಉತ್ತರ ಕರ್ನಾಟಕಕ್ಕೆ ಯಾವ ಅಭಿವೃದ್ಧಿಯೂ ಸಿಗದಂತೆ ನೋಡಿಕೊಂಡ್ರು. ನಮ್ಮ ಕಡೆ ಜನ, ನಮ್ಮ ಭಾಷೆ ನಮ್ಮ ಆಹಾರ
ಇವರಿಗೆ ಅಲರ್ಜಿ. ನಮ್ಮ ಮಾಜಿ ಪ್ರಧಾನಿ ಹುಬ್ಬಳ್ಳಿಗೆ ನೈರುತ್ಯರೇಲ್ವೆ ವಲಯ ಬರುವದನ್ನು ವಿರೋಧಿಸಿದ ರೀತಿ ಇನ್ನೂ ಹಸಿರಾಗಿದೆ. ಮೊದಲು ಕರ್ನಾಟಕ ಅಖಂಡವಾಗಲಿ
ಈ ಪ್ರಾಂತ ಭಾಷೆ ಇವುಗಳಲ್ಲಿನ ಹೀಗಳೆಯುವಿಕೆ ನಿಲ್ಲಲಿ. ಆಮೇಲೆ ಈ ವಿಶ್ವ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳಿಗೊಂದು ಅರ್ಥ ಬರುತ್ತದೆ. ಇಲ್ಲವಾದರೆಇದು ನಮ್ಮ ತೆರಿಗೆ
ದುಡ್ಡಿನಲ್ಲಿ ಈ ಕೊಳಕು ರಾಜಕಾರಣಿಗಳು ತಿಂದು ತೇಗಿ ಹೊಲಸುಮಾಡುವ ಒಂದು ಜಾತ್ರೆ ಮಾತ್ರ.

ಶುಕ್ರವಾರ, ಫೆಬ್ರವರಿ 11, 2011

ಆರುಷಿ--ಕೊಲೆ--ನಿರುತ್ತರ

ಸಾಲೆಯಲ್ಲಿ ಓದಿದ ನೆನಪು--ಮೂರು ಪದಗಳು-ಕಾರ್ಯಾಂಗ,ಶಾಸಕಾಂಗ,ನ್ಯಾಯಾಂಗ. ಈ ಅಂಗಗಳ ಪೈಕಿ
ನಮ್ಮ ದೇಶದಲ್ಲಿ ಕ್ರಿಯಾಶೀಲವಾಗಿರುವುದು ನ್ಯಾಯಾಂಗ ಮಾತ್ರ. ಇತ್ತೀಚಿನ ದಿನಗಳಲ್ಲಿ ಅದು ಪದೇ ಪದೇ
ಸರಕಾರದ ಕಿವಿ ಹಿಂಡುತ್ತಿದೆ. ಅದು ಅಶೋಕ್ ಚವಾಃಣ್ ಗೆ ಕೊಟ್ಟ ಮಂತ್ರಿಗಿರಿಯೇ ಆಗಿರಲಿ,ಕಪ್ಪುಹಣದ ವಿಚಾರವಿರಲಿ,ಸಿಬಲ್ ನ ಉದ್ಧಟತನದ ಮಾತುಗಳಾಗಿರಲಿ ನ್ಯಾಯಾಂಗ ಸಕಾಲಿಕ ಎಚ್ಚರಿಕೆ ಕೊಟ್ಟಿದೆ.  
  
ಕೇಸನ್ನು ಮುಚ್ಚಿ ನಿರಾಳವಾದ
ಸಿಬಿಐ ನ್ನು ಅದು ತರಾಟೆಗೆ ತೆಗೆದುಕೊಂಡಿತು.ಸಿಬಿಐ ಮುಚ್ಚಿದ ಕೇಸು ಆರುಷಿಯದು. ಅವಳು ಕೊಲೆಯಾಗಿ ಮೂರುವರ್ಷ ಕಳೆದರೂ ಕೊಲೆಗಾರ ಪತ್ತೆಯಾಗಿಲ್ಲ. ಅವಳು ಮೈನರ್ ಹುಡುಗಿ. ಸಂಶಯಾಸ್ಪದವಾಗಿ ಸಾವು ಆಗಿತ್ತು.
ಎರಡು ದಿನದ ನಂತರ ಅವರ ಮನೆ ಮಹಡಿಮೇಲೆ ದೊರೆತ ನೌಕರನ ಶವ ಹೀಗೆ ಅನುಮಾನದ ಹುತ್ತ ಬಲವಾಗಿತ್ತು.
ನೋಯ್ಡಾ ಪೋಲಿಸರು ಸಿಬಿಐಗೆ ಕೇಸು ವರ್ಗಾಯಿಸಿದಾಗ ನಿರಾಳವಾದರು.ಎರಡು ವರೆ ವರ್ಷ ಹೆಣಗಾಡಿದರೂ
ಕೇಸು ಬಗೆಹರಿದಿಲ್ಲ. ಸಿಬಿಐ ಕಾರ್ಯವೈಖರಿ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅವರು ನಡೆಸಿದ ವಿಚಾರಣೆಗಳು,
ಮಂಪರು ಪರೀಕ್ಷೆಗಳು ಫಲ ನೀಡದೇ ಹೋಗಿವೆ. ಕೇಸನ್ನು ಮುಚ್ಚಲು ಅದು ಮನವಿಮಾಡಿದಾಗ ನ್ಯಾಯಾಂಗ ಚಾವಟಿ  ಬೀಸಿದೆ.ಆರುಷಿಯ ತಂದೆ ತಾಯಿ ಯನ್ನು ಬಂಧಿಸಿ ವಿಚಾರಿಸುವಂತೆ ಆದೇಶ ನೀಡಿದೆ.
 ಅವರು ಅಪರಾಧಿಗಳು ಅಂತ ತೀರ್ಪು ಹೊರಬಿದ್ದಿಲ್ಲ ಆದರೂ ಅವರನ್ನು ದೋಷಿ ಅಂತ ಪರಿಗಣಿಸಿ ವಿಚಾರಣೆ ಮಾಡುವಂತೆ
ತೀರ್ಪು ನ್ಯಾಯಾಂಗ ಕೇಳಿದೆ.
ಆರುಷಿ ಶವದ ಪೋಸ್ಟಮಾರ್ಟಮ್ ನಲ್ಲಿ ಅವಳ ಗುಪ್ತಾಂಗ, ಸುತ್ತಲಿನ ಭಾಗ ಔಷಧಿಯಿಂದ ತೊಳೆದ ಉಲ್ಲೇಖವಿಲ್ಲ.
ಅಥವಾ ಬೇಕೂಂತಲೇ ಅದನ್ನು ಮುಚ್ಚಿ ಹಾಕಿದ್ದಾರೆ.

ಎರಡು ಸಾಧ್ಯತೆಗಳಿವೆ...
ಮನೆ ಆಳು ಆರುಷಿಯನ್ನು ರೇಪ್ ಮಾಡಿರಬಹುದು ತಂದೆಗೆ ಗೊತ್ತಾಗಿ ತಲ್ವಾರ್ ಡಾಕ್ಟರ್ ಇಬ್ಬರನ್ನೂ ಮುಗಿಸಿದ್ದಾನೆ. ಇದೊಂಥರಾ "ಮರ್ಯಾದಾ ಹತ್ಯೆ" ಅನ್ನಬಹುದು. ಅಂದರೆ ಮಗಳು ರೇಪ್ ಗೆ ಒಳಗಾಗಿದ್ದಾಳೆ
ಇದು ಗೊತ್ತಾದರೆ ತಮ್ಮ ಗೌರವಕ್ಕೆ ಕುಂದು ಬಂದೀತು ಇದು ತಲ್ವಾರ್ ಅಂದುಕೊಂಡಿರಬಹುದೇನೋ... ಅಥವಾ
ಆಳಿನ ಜೊತೆ ಮಗಳು ಸಂಭಂದ ಇಟ್ಟುಕೊಂಡಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ಆವೇಶದಲ್ಲಿ ತಲ್ವಾರ್ ಇಬ್ಬರನ್ನು ಕೊಂದಿರಬಹುದು.

ಇನ್ನೊಂದು ಸಾಧ್ಯತೆ--ನಂಬಲು ಇರಿಸು ಮುರಿಸಾಗಬಹುದು. ಆರುಷಿ ತನ್ನ ತಂದೆಯ ತೃಷೆಗೆ ಒಳಗಾಗಿ ಆಳು
ಇದನ್ನು ಬ್ಲಾಕ್ ಮೇಲ್ ಗೆ ಬಳಸುತ್ತಿದ್ದುದು ರೋಸಿದ ತಲ್ವಾರ್ ಇಬ್ಬರಿಗೂ ಗತಿಕಾಣಿಸಿರಬಹುದು.


ಆರುಷಿಯ ಕೊಲೆ ಅನೇಕ ಮಾಧ್ಯಮಗಳಲ್ಲಿ, ಚಾನೆಲ್ ಗಳಲ್ಲಿ ಚರ್ಚೆಯಾಗಿದೆ. ತಲ್ವಾರ್ ಕೋರ್ಟಗೆ ಹಾಜರಾದಾಗ
ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು .ಹೀಗೆ ಬಿಸಿ ಬಿಸಿ ಸುದ್ದಿ ಹರಿದಾಡಿವೆ. ಸಿಬಿಐಯಂಥ ಸಂಸ್ಥೆಯ ಅಸಮರ್ಥತೆ ನಿರಾಶಾದಾಯಕ. ಎಲ್ಲಕ್ಕೂ ಸೋಜಿಗ ಅಂದರೆ ಡಾಕ್ಟರ್ ತಲ್ವಾರ್ ತನ್ನ ಬಂಧನದ ಸುದ್ದಿ ತಿಳಿದು ನಮ್ಮ ದೇಶವನ್ನು
"ಬನಾನಾ ರಿಪಬ್ಲಿಕ್ " ಅಂತ ನಗಾಡಿದ್ದು.ತಲ್ವಾರ್ ನ ಪ್ರಭಾವ ಖಂಡಿತವಾಗಿ ಮೇಲ್ಮಟ್ಟದಲ್ಲಿ ಇದೆ. ಸುಲಭವಾಗಿ
ತನಿಖೆಯ ಹಾದಿತಪ್ಪಿಸುವ ಚಾಣಾಕ್ಷತನವೂ ಅವನಲ್ಲಿದೆ. ಅವ ನಿಜಕ್ಕೂ ದೋಷಿಯೇ..ನಿಜ ಏನು ಅಂತ ಹೇಳಿದರೆ
ನ್ಯಾಯಾಂಗದ ಅನುಕಂಪ ಖಂಡಿತ ಸಿಗುತ್ತದೆ. ಅವನಲ್ಲಿ  ಆ ಪ್ರಾಮಾಣಿಕತೆ ಇದೆಯೇ..?
ಆರುಷಿ ಇದ್ದಾಗ ಸುದ್ದಿಯಾಗದವಳು ಹೋದಮೇಲೆ ಅದೇಕೆ "ಬ್ರೇಕಿಂಗ್ ನ್ಯೂಸ್" ಆಗಿದ್ದಾಳೆ?

ಮಂಗಳವಾರ, ಫೆಬ್ರವರಿ 1, 2011

ನಮ್ಮ ಸಾಂಸ್ಕೃತಿಕ ದಿವಾಳಿ...

ನಿನ್ನೆ  ಬಿಬಿಎಂಪಿಯಲ್ಲಿ ಬಿಜೆಪಿ ಸದಸ್ಯರು ಆಡಿದ ಮಾತು ಮತ್ತೆ ಮತ್ತೆ ನಮ್ಮ ಸಾಂಸ್ಕೃತಿಕ
ದಿವಾಳಿತನ ತೋರಿಸುತ್ತದೆ.ಮಾನ್ಯ ಸದಸ್ಯರು ಭೀಮಸೇನ ಜೋಶಿ ಅವರ ನಿಧನದ ಬಗ್ಗೆ ಸಂತಾಪಸೂಚನೆ ಮಂಡನೆ ವೇಳೆ ಆಡಿದ ಮಾತುಗಳು.
ತಮ್ಮ ನಿಲುವೇನು ತಮ್ಮ ಸ್ಥಾನಮಾನಕ್ಕಂತೂ ಕವಡೆಯ ಕಿಮ್ಮತ್ತಿಲ್ಲ. ತಾನು ಯಾರಬಗ್ಗೆ
ಹೇಳುತ್ತಿರುವೆ ಆ ವ್ಯಕಿ ಗಳಿಸಿದ ಉನ್ನತ ಸ್ಥಾನಯಾವುದಿತ್ತು ಆ ವ್ಯಕ್ತಿಯಬಗ್ಗೆ ತಾನು ಹಗುರಾಗಿ ಮಾತನಾಡಿದರೆ ತನ್ನ  ಕಿಮ್ಮತ್ತೇನು ಯಾವುದು ಆ ಸದಸ್ಯ ಯೋಚಿಸಿಲ್ಲ.
ಇದೇ ಮಾತು ಮಹಾರಾಷ್ಟ್ರದಲ್ಲಿ ಯಾರಾದರೂ ಅಂದಿದ್ದರೆ ಹಾಹಾಕಾರ ವಾಗುತ್ತಿತ್ತು. ನಾವೇಕೆ ಹೀಗೆ ಹೊಸ ಗಾಳಿ ಹೊಸ ಆಲೋಚನೆ ನಮ್ಮೆಡೆಗೆ ಸುಳಿಯದಂತೆ ಕಿಡಕಿ ಮುಚ್ಚಿಕೊಂಡಿದ್ದೇವೆ. ಅದ್ಯಾಕೆ ನಾವು ಇನ್ನೂ ಪ್ರಾಂತ, ಜಾತಿ ಇತ್ಯಾದಿ ಚಿಲ್ಲರೆ ಸಂಗತಿಗಳಿಂದ ಮುಕ್ತವಾಗಿಲ್ಲ. ಭೀಮಸೇನ ಜೋಶಿ ಇಡೀ ಭಾರತದ ಆಸ್ತಿ ನಿಜ. ಆದರೆ ಅವರು ಹುಟ್ಟಿಬೆಳೆದಿದ್ದು ಕನ್ನಡಮ್ಮನ ಮಡಿಲಲ್ಲಿ..! ಬಹುಷಃ  ಅವರು ಹಳೇ ಮೈಸೂರು ಕಡೆಯವರಾಗಿದ್ದು ಕರ್ನಾಟಕಿ
 ಹಾಡಿದ್ದರೆ ಬೇರೆಯಾಗುತ್ತಿತ್ತೇನೋ ! ಒಂದು ನೆನಪಿನ ಸಂಚಿಕೆ ಇಲ್ಲ ಯಾವುದೇ ಚಾನೆಲ್ ನಲ್ಲಿ ಅವರು ಹಾಡಿದ ಹಾಡು ಪ್ರಸಾರವಾಗಲಿಲ್ಲ. ಅನೇಕ ಯುವಗಾಯಕರಿದ್ದಾರೆ ನಮ್ಮಲ್ಲಿ..
ಭೀಮಸೇನ ಜೋಶಿಗೆ ಸ್ಮರಣಾಂಜಲಿ ಅಂತ ತಿಳಿದು ಆ ಯುವಗಾಯಕರಿಂದ ಜೋಶಿ ಜನಪ್ರಿಯಗೊಳಿಸಿದ ದಾಸವಾಣಿ ಹಾಡಿಸಬಹುದಿತ್ತು. ಅದೇ ಝಿ ಮರಾಠಿ ಚಾನೆಲ್ ನವರು ತಮ್ಮ ಜನಪ್ರಿಯ"ನಕ್ಷತ್ರಾಚೆ ದೇಣೆ.."
ಕಾರ್ಯಕ್ರಮ ಮಾಡಿದರು. ಸುಮಾರು ಎರಡುಗಂಟೆಗಳವರೆಗೆ ಜೋಶಿಯವರ ಶಿಷ್ಯರಾದ ಮಾಧವ್ ಗುಡಿ,
ಉಪೇಂದ್ರ ಭಟ್, ಶ್ರೀಕಾಂತ ದೇಶಪಾಂಡೆ, ಶ್ರೀನಿವಾಸ್ ಜೋಶಿ(ಭೀಮಸೇನರ ಮಗ) ಅಕ್ಷರಶಃ ಸ್ವರಗಂಗೆ ಹರಿಸಿದ್ರು. ಅದರಲ್ಲಿ ವಿಶೇಷ ಅಂದ್ರೆ ಉಪೇಂದ್ರ ಭಟ್ "ಭಾಗ್ಯದ ಲಕ್ಷ್ಮಿ.." ಹಾಡಿ ನಲಿದರು. ಅಂದ್ರೆ ಮರಾಠಿಗರು
ಬೆಳಗಾವಿ ವಿಶಯದಲ್ಲಿ ಏನೇ ಇರಲಿ ಇಂಥ ವಿಷಯ ಬಂದಾಗ ಚಪ್ಪಾಳೆ ಹೊಡಿಯುವುದಕ್ಕೂ ಮುಂದು..!

ಇನ್ನೇನು ಎರಡುದಿನ ಕಳೆದು ಸಮ್ಮೇಳನ ಸುರುಆಗಲಿದೆ. ಹಾದಿ ಬೀದಿ ಸಿಂಗಾರಗೊಳ್ಳುತ್ತಿವೆ. ನಮ್ಮ ರಾಜಕಾರಣಿಗಳ
ಅಂದು ಧರಿಸುವ ಅಂಗಿ ಇಸ್ತ್ರಿಗೊಳ್ಳುತ್ತಿವೆ. ಎಷ್ಟಿದ್ದರೂ ಅವರದೇ ಕಾರುಭಾರು. ಸಾಹಿತ್ಯ, ಸಾಹಿತಿ,ಅದರ ಮಹತ್ವ
ಎಲ್ಲ ಹಿಂದೆಸರಿದು ಸ್ಟಾರ್ಚ ಹಾಕಿದ ರಾಜಕಾರಣಿಗಳ ಖಾದಿ ಮಿನುಗುವ ಪರ್ವ. ಭಾನುವಾರದ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಚಂದ್ರಕಾಂತ್ ಪೋಕಳೆ ನಾವು ಮಾಡುವ ಸಮ್ಮೇಳನ ಹಾಗೂ ಮರಾಠಿಗರು ಮಾಡುವ ಸಮ್ಮೇಳನಕ್ಕೆ
ಇರುವ ವ್ಯತ್ಯಾಸ ಹೇಳಿದ್ದಾರೆ. ಅಲ್ಲಿ ಬರೆದ ವಿಷಯ ಅನುಕರಣೀಯ. ಆದರೆ ಅದನ್ನು ಆಚರಣೆಗೆ ತಂದರೆ ನಮ್ಮ
ಕಸಾಪ್ ದ ಪಾಡೇನು..?ಉಸ್ತುವಾರಿ ಹೊಂದಿದ ಸಚಿವರ ಶಾಸಕರ ಗತಿ ಏನು? ಪಾಪ ಜೇಬು ಇನ್ನೂ ದೊಡ್ಡದಾಗಿ
ಹೊಲಿಸಿಕೊಂಡಿದ್ದಾರೆ ಅದು ತುಂಬಬೇಡವೇ... ಸಮ್ಮೇಳನದ ಅಧ್ವಾನಗಳು, ಹಗರಣಗಳು ಹೇಗೆ ಇರಲಿ..ಆದರೆ
ಅಧ್ಯಕ್ಷರಾಗಲಿರುವ "ಜೀವಿ" ಬಗ್ಗೆ ಕೊಂಕಿಲ್ಲ. ಅಧ್ಯಕ್ಷಗಿರಿ ಅವರಿಗೆ ಕೊಟ್ಟು ಕಸಾಪ ಗೌರವ ಸಂಪಾದಿಸಿದೆ ಅಂತಲೇ
ಹೇಳಬೇಕು.

ಈಜಿಪ್ತ ಜನ ಸಿಡಿದೆದ್ದಿದ್ದಾರೆ.ಮುಬಾರಕ್ ಓಡಿಹೋಗಲು ತಯಾರಾಗಿದ್ದಾನೆ. ಅನ್ಯಾಯ ಅಕ್ರಮ ಅರಾಜಕತೆಇವೇ
ಆ ಜನ ಅನುಭವಿಸುತ್ತಿರುವುದು. ಅವರು ಸಂಘಟಿತರಾಗಿದ್ದಾರೆ.ಬೀದಿಗಿಳಿದಿದ್ದಾರೆ. ನಮ್ಮ ಸ್ಥಿತಿ ಭಿನ್ನ ವಲ್ಲ. ಬಡವರು
ಖುಷಿಯಿಂದ ತಿನ್ನುವ ಉಳ್ಳಾಗಡ್ಡಿ ಸಹ ಅಕ್ರಮವಾಗಿ ದಾಸ್ತಾನಾಗಿತ್ತು. ಬೆಲೆ ಗಗನ ಮುಟ್ಟಿತ್ತು. ಶಾಂತಿಪ್ರಿಯರಾದ
ನಾವು ಅಲ್ಲಿ ಇಲ್ಲಿ, ಬಸ್ಸಿನಲ್ಲಿ, ಚಾಟ್ ಗಳಲ್ಲಿ, ಬಜ್ ಗಳಲ್ಲಿ ಚರ್ಚಿಸಿದೆವು...ಮತ್ತೆಲ್ಲ ಮರೆತೆವು. ಕಪ್ಪುಹಣದ ಖುಲಾಸೆಸಾಧ್ಯನೇ ಇಲ್ಲ ಅಂತ ಅರ್ಥಮಂತ್ರಿ ಹೇಳ್ತಾರೆ.., ಆಡಿಟರ್ ಕೊಟ್ಟ ಅಂಕಿನೇ ತಪ್ಪು ಅಂತ ಕಪಿಲ್ ಸಿಬಲ್ ಹೇಳ್ತಾರೆ..,ನಾವು ಎಂದೂ ಸೇಫ್ ಅಲ್ಲ ಭಯೋತ್ಪಾದಕರು ಬೇರೆ ರೂಪದಲ್ಲಿ ಬರುತ್ತಾರೆ ಅಂತ ಸ್ವತಃ ಗೃಹ ಮಂತ್ರಿನೇ ಹೇಳ್ತಾರೆ...! ನಾವೆಲ್ಲಿದ್ದೇವೆ ಎಲ್ಲಿ ಹೋಗುತ್ತಿದ್ದೇವೆ ಪ್ರಶ್ನಿಸಿಕೊಳ್ಳಲು ಸಕಾಲ ಇದು ಏನಂತೀರಿ..?

ಅಮೇರಿಕಾದ ವಿಶ್ವವಿದ್ಯಾಲಯವೊಂದು ಭಾರತೀಯ ಮೂಲದ ಹದಿನೆಂಟು ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್
ಕಟ್ಟಿದೆ. ಆ ವಿವಿ immigration ನಿಯಮ ಪಾಲಿಸಿಲ್ಲ ಇದು ಅಲ್ಲಿಯ ಸರಕಾರದ ದೂರು. ಆದರೆ ವಿದ್ಯಾರ್ಥಿಗಳ
ಪಾಡೇನು? ನಮ್ಮ ವಿದೇಶಮಂತ್ರಿ ಕೈ ತೊಳೆಯುವ ಮಾತಾಡಿದ್ದಾರೆ. ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರಿಯ.

ಅಂತೂ ಕೊಲ್ಕತ್ತಾ ಬಡವಾಯಿತು. ೨೭/೦೨ ರ ವಿಶ್ವಕಪ್ ಪಂದ್ಯ ಬೆಂಗಳೂರಿನಲ್ಲಿ. ಧೋನಿ ಆತ್ಮವಿಶ್ವಾಸದಿಂದಿದ್ದಾನೆ. ಇದೇ ತರ ಎಲ್ಲರೂ..ಒಟ್ಟಿನಲ್ಲಿ ರಸದೌತಣ್ ಇದೆ.

  

ಶನಿವಾರ, ಜನವರಿ 29, 2011

ಮೊದಲಿಗೆ....


ಇದು ಇನ್ನೊಂದು ಪ್ರಯತ್ನ. ಈಗಾಗಲೇ ಘಟಾನುಘಟಿಗಳಾದ ಮಾಜಿ ಲೇಖಕರು,ಸಂಪಾದಕರು, ಜಲನೀರು ತಂತ್ರಜ್ನರು ಈ ಬ್ಲಾಗ್ ಲೋಕಕ್ಕೆ ಬಂದಿದ್ದಾರೆ. ಅವರೇ ಹೇಳುವ ಹಾಗೆ ಅವರ ಈ ಪ್ರಯತ್ನಗಳಿಗೆಅಭೂತಪೂರ್ವ
ಪ್ರತಿಕ್ರಿಯೆಯೂ ದೊರೆತಿದೆ. ಬ್ಲಾಗ್ ಲೋಕದಲ್ಲಿ ಅದಾಗಲೇ ಅವರ ವಿಜಯ ಪತಾಕೆ ಹಾರುತ್ತಿದೆಯಂತೆ.ಅವರಿಗೆ
ಅಭಿನಂದನೆಗಳು. ಅವರ ಪ್ರಯತ್ನದಲ್ಲಿ ಯಶ ಸಿಗಲಿ. ಆದರೆ ಒಂದಾನೊಂದು ಕಾಲದ ಪರಮಾಪ್ತ ಮತ್ತು ಈಗಿನ
ಪತ್ರಿಕೆಯ ಸಂಪಾದಕನನ್ನೇ ಗುರಿಯಾಗಿಸಿ ಇವರು ಬರೆಯುತ್ತಿರುವ ಹಾಗಿದೆ. ಅವರ ಜಗಳ ಈ ಬ್ಲಾಗ್ ಜಗತ್ತಿಗೆ ತಂದು ನಿಧಾನವಾಗಿ ಈ ಬ್ಲಾಗ್ ಲೋಕ ಹೊಲಸುಮಾಡುತ್ತಿದ್ದಾರೆ...!
ಈಗಲೇ ಅನೇಕ ದ್ವಂದ್ವ ,ಹತಾಶೆ ನಿರಾಸೆಗಳಿಂದ  ಬ್ಲಾಗಿಗರು ಬಳಲಿದ್ದಾರೆ
ಈ ಮಹನೀಯರ ಕೋಳಿ ಜಗಳ ಯಾರಿಗೆ ಬೇಕು...?

ಎಲ್ಲಿ ಸುತ್ತಿದರೂ ಅಲ್ಲೇ ಗಿರಕಿ ಹೊಡೆಯುತ್ತದೆ. ಅದೇ ಯಶವಂತನ ದುರಂತ ಸಾವು. ಆರೋಪಿ ಪೋಪಟ್ ಶಿಂಧೆ ಇನ್ನು  ಜೀವನ್ಮರಣದ ಹೋರಾಟದಲ್ಲಿದ್ದಾನೆ. ಅವನಿಗೆ ೨೦೦೬ ರಲ್ಲಿಯೇ ನಾಸಿಕ್ ನಿಂದ
 ತಡೀಪಾರ್ ಆದೇಶ ಹೊರಡಿಸಲಾಗಿತ್ತು. ಆದರೂ ೨೫/೦೧/೨೦೧೧ ರ ವರೆಗೂ ಅಲ್ಲಿಯೇ ಠಿಕಾಣಿ ಹೂಡಿದ್ದ. ಇಂದು ಮಹಾರಾಷ್ಟ್ರ ಸುತ್ತುತ್ತಿರುವ ರಾಹುಲ್ ಒಂದು ಅಣಿಮುತ್ತು ಉದುರಿಸಿದ್ದಾನೆ. ನೈತಿಕತೆ ಯಾವ ಪಾರ್ಟಿಯಲ್ಲಿಯೂ ಉಳಿದಿಲ್ಲ ಅಂತ.  ಎದೆಗಾರಿಕೆಯ ಮಾತು ಅನ್ನೋಣವೇ...?
ಸ್ವತಃ ಕಾಂಗ್ರೆಸ್ ನಿತ್ರಾಣವಾಗಿದೆ.ಕೋಟಿ ನುಂಗಿದ ಸ್ಪೆಕ್ಟ್ರಮ್, ಸ್ವಿಸ್ ಬ್ಯಾಂಕಿನ ಖಾತೆಯ ಭೂತ, ಸುಪ್ರೀಮ್ ಕೋರ್ಟ್ ಕಿರಿಕಿರಿ ಮೇಲಾಗಿ ಬ್ಯಾಟು ಹಿಡಿದೇ ನೇಗಿಲಾನೂ ಹೂಳ್ತೇನಿ ಅನ್ನೋ ಶರದ್ ಪವಾರ್ ಎಲ್ಲರನ್ನು ಸಂಭಾಳಿಸುವುದು ಮನಮೋಹನ್ ಸಾಹೇಬ್ರಿಗೇನು ಸೋನಿಯಾ ಮೇಡಂಗೂ
ಇಕ್ಕಟ್ಟಾಗ್ತಿತ್ತು. ಹೀಗಂತೆಯೇ ಅದು ಒಂದು ಜಾಣದಾರಿ ಅನುಸರಿಸಿದೆ. ಅವರ ಕಡೆ ದಿಗ್ವಿಜಯ್ ಅನ್ನೋ ಆಸಾಮಿ ಅದೆ. ಅದು ಆವಾಗಾವಾಗ ಬಾಯಿತೆರೆಯುತ್ತೆ ಏನೇನೋ ಹೇಳುತ್ತೆ. ಸ್ವಲ್ಪದಿನ ಮಿಡೀಯಾ ಮಂದಿ ಅವ ಹೇಳಿದ್ದನ್ನೇ
ಪುಂಗಿ ಊದ್ತಾರೆ .ಅವನ ಹೇಳಿಕೆಗಳೂ ಬಿಜೆಪಿ, ಸಂಘಪರಿವಾರದ ವಿರುದ್ಧ ಅಂತ ಪ್ರಚಾರ ಗ್ಯಾರಂಟಿ ಸಿಗ್ತವೆ.
ಇತ್ತೀಚೆಗೆ ಆತ ಸಾವರಕರ್ ಮೇಲೆ ಅಪವಾದ ಹೊರಿಸಿದಾನೆ. ಹಿಂದೆ ಕರ್ಕರೆ ಫೋನು ಮಾಡಿದ್ರು ಅಂತ ಹೇಳಿದ
ಹೀಗೆ ಹಾಲಿ ಇಲ್ಲದವರನ್ನು ಅದೇಕೆ ಈತ ಬಳಸಿಕೊಳ್ತಾನೋ ಗೊತ್ತಿಲ್ಲ.

ಈಡನ್ ಗಾರ್ಡನ್ ನಲ್ಲಿ ಆಡದಿದ್ದುದು ಬ್ರಾಡ್ ಗೆ ನಿರಾಸೆಮೂಡಿಸಿದೆಯಂತೆ. ನಿಜವೇನೇ ಇರಲಿ ಇದರಲ್ಲಿ ಬೋರ್ಡು ಹಾಗೂ ದಾಲ್ಮಿಯಾರ ತಿಕ್ಕಾಟವೂ ಕಾರಣವೇ ಗೊತ್ತಿಲ್ಲ. ಅಂತೂ ವಿಶ್ವಕಪ್ ಜ್ವರ ಏರುತ್ತಿದೆ.ಇಂದು ಅಫ್ರಿದಿ ಆಡಿದ
ಅದ್ಭುತ ಆಟ ನೋಡಿದ್ರೆ ಪಾಕ್ ಈ ವಿಶ್ವಕಪ್ಪಿನ  "ಕಪ್ಪುಕುದುರೆ" ಅಂತ ಅನುಮಾನ ಬರುತ್ತಿದೆ.